ಹಾಸನ: ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ದೊಡ್ಡವರಿಗೆಲ್ಲಾ ಪತ್ರಿಕೆ ನೀಡಿ ಆಹ್ವಾನ ಮಾಡುತ್ತಿದ್ದಾರೆ. ಮೊದಲಿಗೆ ಸ್ವಾಮೀಜಿಗಳ ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಪತ್ರಿಕೆ ಹಂಚುತ್ತಲೇ ಡಾಲಿ ಧನಂಜಯ್ ಮದುವೆ ಬ್ಯುಸಿಯಲ್ಲಿದ್ದಾರೆ. ಚಿತ್ರದುರ್ಗದ ಅಳಿಯನಾಗುತ್ತಿದ್ದು, ವೈದ್ಯೆಯಾಗಿರುವ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ.
ಡಾಲಿ ಅವರಿಗೆ ಬಡವರ ಮೇಲೆ ಪ್ರೀತಿ ಜಾಸ್ತಿ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ ಎಂಬ ಮಾತಿನಿಂದಾನೇ ಹೆಚ್ಚು ಫೇಮಸ್ ಆಗಿದ್ದು. ಇದೀಗ ಬಡವರ ಮಕ್ಕಳಿಗಾಗಿ ಅಭಿವೃದ್ಧಿ ಮಂತ್ರ ಪಠಿಸುವುದಕ್ಕೆ ಶುರು ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಡಾಲಿ ಧನಂಜಯ ತಾವೂ ಓದಿದ ಶಾಲೆಯ ಅಭಿವೃದ್ಧಿ ಮಾಡಿಸುತ್ತಿದ್ದಾರೆ.
ಹೌದು, ಮದುವೆಗೂ ಮುನ್ನ ಒಂದೊಳ್ಳೆ ಕಾರ್ಯಕ್ಕೆ ಕೈ ಹಾಕಿದ್ದು, ಎಲ್ಲರಿಂದ ಆಶೀರ್ವಾದ ಪಡೆದಿದ್ದಾರೆ. ಡಾಲಿ ಓದಿದ್ದು ಬೆಳೆದಿದ್ದೆಲ್ಲ ತಮ್ಮ ಹುಟ್ಟೂರಿನಲ್ಲಿಯೇ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯಲ್ಲಿ. ಇತ್ತೀಚೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಅಷ್ಟಕ್ಕಷ್ಟೇ. ಉಳಿದಿರೋ ಅಲ್ಪಸ್ವಲ್ಪ ಶಾಲೆಗಳು ಕೂಡ ಅವನತಿಯತ್ತ ಸಾಗುತ್ತಿವೆ. ಮಕ್ಕಳನ್ನೆಲ್ಲ ಪೋಷಕರು ಖಾಸಗಿ ಶಾಲೆಗೆ ಸೇರಿಸಿದರೆ ಸರ್ಕಾರಿ ಶಾಲೆಯ ಅಭಿವೃದ್ಧಿಯಾಗುವುದಾದರೂ ಹೇಗೆ ಹೇಳಿ..? ಆದರೆ ಸರ್ಕಾರಿ ಶಾಲೆಗೂ ಮಕ್ಕಳು ಬರುತ್ತಾರೆ. ತೀರಾ ಕಡಿಮೆ ಸಂಖ್ಯೆಯಲ್ಲಿ. ಕಾಳೇನಹಳ್ಳಿ ಸರ್ಕಾರಿ ಶಾಲೆಗೂ ಮಕ್ಕಳು ಬರುತ್ತಾರೆ. ಆದರೆ ಶಾಲೆಯ ಅಭಿವೃದ್ಧಿ ಮಾತ್ರ ಕಂಡಿಲ್ಲ. ಹೀಗಾಗಿ ತಾನೂ ಓದಿದ ಶಾಲೆಯ ದುರಸ್ತಿಯನ್ನ ತನ್ನ ಹಣದಲ್ಲಿ, ತಾನೇ ನಿಂತು ಮಾಡಿಸಿದ್ದಾರೆ ಡಾಲಿ ಧನಂಜಯ. ಬಡವರ ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.