ಸರಳ, ಅರ್ಥಪೂರ್ಣ ಒನಕೆ ಓಬವ್ವ ಜಯಂತಿ ಆಚರಣೆ

2 Min Read

ಚಿತ್ರದುರ್ಗ, (ನವೆಂಬರ್.10) : ಇದೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಒನಕೆ ಓಬವ್ವ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ವಿಧಾನ ಪರಿಷತ್ತಿಗೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸಾರ್ವತ್ರಿಕ ಚುನಾವಣೆ-2021ರ ಸಂಬಂಧ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವುದರಿಂದ ಹಾಗೂ ಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಒನಕೆ ಓಬವ್ವ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹಾಗೂ  ಅದ್ಧೂರಿಯಾಗಿ ಜಯಂತಿ ಆಚರಣೆ ಮಾಡೋಣ ಎಂದರು.

ಜಯಂತಿ ಅಂಗವಾಗಿ ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ನಗರದ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಪುರಾತತ್ವ ಇಲಾಖೆ ವತಿಯಿಂದ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಕಚೇರಿಯ ಒನಕೆ ಓಬವ್ವ ವೃತ್ತದಲ್ಲಿ ಓಬವ್ವನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11 ಕ್ಕೆ ಸರಳವಾಗಿ ಜಯಂತಿ ಕಾರ್ಯಕ್ರಮ ನಡೆಯಲಿದೆ.

ಕೋಟೆನಾಡು ಚಿತ್ರದುರ್ಗ ಎಂದ ತಕ್ಷಣ ಇದರ ಜೊತೆಗೆ ಒನಕೆ ಓಬವ್ವನ ಹೆಸರು ತಳಕುಹಾಕಿಕೊಂಡಿರುತ್ತದೆ. ಸರ್ಕಾರದ ವತಿಯಿಂದ ಒನಕೆ ಓಬವ್ವ ಜಯಂತಿ ಜಯಂತಿ ಆಚರಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಹಾಗೂ ಸಂತಸದ ಸಂಗತಿಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಮಾತನಾಡಿ, ಚಿತ್ರದುರ್ಗದ ವೀರ ಮಹಿಳೆ ಒನಕೆ ಓಬವ್ವ ಅವರ ಜಯಂತಿಯನ್ನು ಆಚರಿಸುವಂತೆ ಸರ್ಕಾರ ಆದೇಶ ಮಾಡಿದ್ದು, ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಹಂತೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ತಹಶೀಲ್ದಾರ್ ಸತ್ಯನಾರಾಯಣ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಾಜಶೇಖರ್ ಉಪಾಸಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ನೀಲಕಂಠಾಚಾರ್ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *