ಸ್ಥಳೀಯರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಜುಲೈ 24 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಸಿರಿಗೆರೆಯ ತಣಿಗೆಹಳ್ಳಿ ಸಮೀಪ ಡಿ.ಮದಕರಿಪುರದ ಹತ್ತಿರವಿರುವ ಗಣಿಬಾಧಿತ ಪ್ರದೇಶಗಳ ಜನ ಶನಿವಾರದಿಂದ ಪ್ರತಿಭಟನೆ ಆರಂಭಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ 52 ಲಾರಿಗಳೊಂದಿಗೆ ಕಾಲ್ನಡಿಗೆ ಜಾಥ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸ್ಥಳೀಯರಿಗೆ ಕೆಲಸ ಕೊಡುವಂತೆ ಒತ್ತಾಯಿಸಲಿದ್ದಾರೆ.

ಜಿಲ್ಲಾ ಬಂಜಾರ ಲಂಬಾಣಿ ಸಮಾಜ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇನೆ, ವಾಲ್ಮೀಕಿ ಸೇನೆ ಹಾಗೂ ವಾಲ್ಮೀಕಿ ಜನಾಂಗದ ವತಿಯಿಂದ ಜಾನ್ ಮೈನ್ಸ್, ವೇದಾಂತ ಮೈನ್ಸ್‍ನವರು ತೋರುತ್ತಿರುವ ದರ್ಪದ ವಿರುದ್ದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿರುವವರು ಮಂಗಳವಾರ ಬೆಳಿಗ್ಗೆ ಕಾಲ್ನಡಿಗೆ ಜಾಥ ಆರಂಭಿಸಿ ಹದಿನೈದು ಕಿ.ಮೀ. ಬಳಿಕ ರಾತ್ರಿ ಮಾರ್ಗ ಮಧ್ಯದಲ್ಲಿ ಎಲ್ಲಿಯಾದರೂ ತಂಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸೇರಿದ 52 ಲಾರಿಗಳನ್ನು ಜಾನ್ ಮೈನ್ಸ್ ಹಾಗೂ ವೇದಾಂತ ಮೈನ್ಸ್ ನವರು ಗಣಿಗಾರಿಕೆಗೆ ಬಳಸಿಕೊಂಡು ಈಗ ಏಕಾಏಕಿ ನಿಲ್ಲಿಸಿರುವುದರಿಂದ ಫೈನಾನ್ಸ್‍ಗಳಿಂದ ಸಾಲ ಪಡೆದಿರುವವರು ಇ.ಎಂ.ಐ. ಹಾಗೂ ಸಾಲಗಳನ್ನು ಕಟ್ಟಲಾಗದೆ ಬೀದಿಗೆ ಬಿದ್ದಿದ್ದಾರೆ. ಹೊರಗಿನಿಂದ ಕೆಲಸಗಾರರನ್ನು ಕರೆಸಿಕೊಂಡಿರುವ ಎರಡು ಮೈನ್ಸ್‌ ನವರು ಸ್ಥಳೀಯರಿಗೆ ಏಕೆ ಕೆಲಸ ಕೊಡುತ್ತಿಲ್ಲ ಎಂದು ಪ್ರತಿಭಟನಾನಿರತರು ಪ್ರಶ್ನಿಸುತ್ತಿದ್ದಾರೆ.

ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಸತೀಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ಮದಕರಿನಾಯಕ ಯುವಸೇನೆಯ ರಾಜಣ್ಣ, ತಿಪ್ಪೇಶಿ, ಸುಂದರಮೂರ್ತಿ, ರಘು, ಉಮಾಪತಿ, ತಿಪ್ಪೇಸ್ವಾಮಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *