ಚಿತ್ರದುರ್ಗ: ವಾಣಿ ವಿಲಾಸ ಸಾಗರ ಕಡೆಗೂ ಕೋಡಿ ಬಿದ್ದಿದ್ದು, ಚಿತ್ರದುರ್ಗ ಜಿಲ್ಲೆಯ ರೈತರು ಫುಲ್ ಖುಷಿಯಾಗಿದ್ದಾರೆ. ಜಲಾಶಯ ನಿರ್ಮಾಣವಾದಾಗಿನಿಂದ ಮೂರು ಬಾರಿ ಭರ್ತಿಯಾಗಿದೆ. ಸದ್ಯ ಜನವರಿ 18ಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ.
ಜಲಾಶಯ ಕೋಡಿ ಬಿದ್ದಿರುವುದು ಇಡೀ ಜಿಲ್ಲೆಯ ರೈತರಿಗೆ ಸಂತಸದ ವಿಚಾರವೇ ಸರಿ. ಆದರೆ ಕೋಡಿ ಬಿದ್ದಿರುವುದು ಸಂಭ್ರಮಕ್ಕಷ್ಟೇ, ಬದುಕಿಗಲ್ಲ ಎಂಬಂತೆ ಫೀಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಜಲಾಶಯದಲ್ಲಿನ ನೀರನ್ನ ರೈತರ ಬಳಕೆಗೆ ಯಾವಾಗ ಹರಿಸುತ್ತಾರೆ ಎಂಬ ವೇಳಾಪಟ್ಟಿಯೇ ನಿಗದಿಯಾಗಿಲ್ಲ. ಇದು ರೈತರ ಬೇಸರಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಬಂದು ಬಾಗಿನ ಅರ್ಪಿಸುವ ತನಕವೂ ನೀರನ್ನ ಹೊರಗೆ ಬಿಡಲ್ಲ. ಬೆಳೆಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂಬುದೇ ರೈತರಿಗೆ ಬೇಸರವಾಗಿದೆ.
2022ರಲ್ಲೂ ವಾಣಿ ವಿಲಾಸ ಸಾಗರ ಕೋಡಿ ಬಿದ್ದಿತ್ತು. ಅಂದು ಕೂಡ ನೀರು ಬಿಡಲು ವೇಳಾಪಟ್ಟಿ ನಿಗದಿ ಪಡಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ರೈತರು ಬೆಳೆ ಬೆಳೆಯಲು ಆಗಲಿಲ್ಲ. ರೈತರ ಬೇಡಿಕೆಯಂತೆ ನೀರು ಹರಿಸಿದರೆ ಋತುಮಾನಕ್ಕೆ ತಕ್ಕ ಹಾಗೇ ಬೆಳೆ ಬೆಳೆಯಬಹುದು ಎಂಬ ಮಹದಾಸೆ. ಎರಡು ಬಾರಿ ಕೋಡಿ ಬಿದ್ದಾಗಲೂ ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ನೀರು ಹರಿಸಿ ಎಂದು ರೈತರು, ಹೋರಾಟಗಾರರು ಒತ್ತಾಯ ಮಾಡುತ್ತಲೇ ಇದ್ದಾರೆ. ಈಗ ಮೂರನೇ ಬಾರಿಗೆ ಕೋಡಿ ಬಿದ್ದರು ಸಹ ವೇಳಾ ಪಟ್ಟಿ ನಿಗದಿಯಾಗಿಲ್ಲದೆ ಇರುವುದು ಮತ್ತೆ ಜಲಾಶಯದ ನೀರು ನಂಬಿ ಹಲವು ಬೆಳೆ ಬೆಳೆಯಬೇಕೆಂಬ ರೈತರ ಕನಸು ಕನಸಾಗಿಯೇ ಉಳಿಯಲಿದೆ.
ಡಿಸೆಂಬರ್ 15ರಿಂದ ಜನವರಿ 15ರ ತನಕ ನೀರು ಹರಿಸಿದರೆ ಶೇಂಗಾ, ಸೂರ್ಯಕಾಂತಿ, ರಾಗಿ, ಹತ್ತಿ ಒತರೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಜಲಾಶಯಗಳು ಇರುವ ಕಡೆಗಳಲೆಲ್ಲಾ ನೀರಿನ ಪಭ್ಯತೆ, ಬಳಕೆ ಪ್ರಮಾಣಕ್ಕೆ ಅಗತ್ಯವಿರುವ ನೀರಿನ ಲೆಕ್ಕಾಚಾರ ಮಾಡಿ ಬೆಳೆಗಳನ್ನು ಪೂರಕವಾಗಿ ನೀರು ಹರಿಸಲಾಗುತ್ತದೆ. ಇಲ್ಲಿನ ರೈತರಿಗೆ ಅಂತಹ ಅವಕಾಶವೇ ಇಲ್ಲ. ಪ್ರತಿ ಬಾರಿ ಚಾನೆಲ್ ಗೆ ನೀರು ಹರಿಸಬೇಕೆಂದಾಗಲೂ ಹರಸಾಹಸದ ಸನ್ನಿವೇಶ ನಿರ್ಮಾಣ ಲವಾಗುತ್ತದೆ ಎಂದು ರೈತ ಮುಖಂಡ ಹಾರನಕಟ್ಟೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.