ಸುದ್ದಿಒನ್, ಚಿತ್ರದುರ್ಗ, ಸೆ.24 : ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೊದಲ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಿ. 30 ಮತ್ತು 31 ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಏರ್ಪಡಿಸಲು ಎರಡೂ ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಅಂತರ ಜಿಲ್ಲಾ ಸಮ್ಮೇಳನವು ಸಾಣೇಹಳ್ಳಿ ಜರುಗುತ್ತಿರುವುದು ಉತ್ತಮ ಸಂಗತಿಯಾಗಿದೆ. ಇದಕ್ಕೆ ನಮ್ಮ ಸಹಕಾರವಿದೆ. ಸಮ್ಮೇಳನಗಳು ಏರ್ಪಡಿಸುವಾಗ ಹಲವಾರು ಸಮಸ್ಯೆಗಳು ಇರುತ್ತವೆ. ಕೆಲವೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ತೋರಿಸುವುದು ಸರಿಯಲ್ಲ. ಸಾಣೇಹಳ್ಳಿ ಮಠದಲ್ಲಿ ಶಿಸ್ತು ಮತ್ತು ಸಮಯಪಾಲನೆ ಅಚ್ಚುಕಟ್ಟಾಗಿ ಮಾಡುತ್ತೇವೆ. ಈ ಹಿಂದೆ ಬಿ.ವಿ.ವೈಕುಂಟರಾಜುರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ ಉತ್ತಮ ಆತಿಥ್ಯ, ಸಾಹಿತ್ಯದ ಗೋಷ್ಟಿಗಳನ್ನು ಏರ್ಪಡಿಸಿದ್ದವು. ಬಂದಿದ್ದ ಸಾಹಿತ್ಯಾಸಕ್ತರಿಗೆ ಕಾಯಿ ಹೋಳಿಗೆ, ರೊಟ್ಟಿ, ಸೇರಿದಂತೆ ಉತ್ತಮ ಊಟದ ಸೌಲಭ್ಯಗಳನ್ನು ಒದಗಿಸಿದ್ದೇವೆ. ಅತಿಥಿಗಳು ಪ್ಲಾಸ್ಟಿಕ್ ಹಾರಗಳು, ಶಾಲುಗಳು, ಸ್ಮರಣಿಕೆಗಳನ್ನು ನೀಡುವ ರೂಢಿಯನ್ನು ಬಿಡಬೇಕು. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಬದಲಾಗಿ ಟವೆಲ್ ಗಳನ್ನು ನೀಡಬಹುದಾಗಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ಪಾರದರ್ಶಕತೆ ರೂಢಿಸಿಕೊಳ್ಳಬೇಕು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಸಾಣೇಹಳ್ಳಿ ಗ್ರಾಮವು ಜಿಲ್ಲೆಯಲ್ಲಿ ಕಲೆ,ಧರ್ಮ ಮತ್ತು ಸಂಸ್ಕøತಿಯ ಸಂರಕ್ಷಣೆಯ ಪ್ರಮುಖ ಸ್ಥಳವಾಗಿದೆ. ಹೀಗಾಗಿ ಪ್ರಥಮ ಅಂತರ ಜಿಲ್ಲಾ ಸಮ್ಮೇಳನ ಜರುಗಿಸಲು ಯೋಜಿಸಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ರಾಜ್ಯ ಬರವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಡಂಬರವಿಲ್ಲದೆ ಸಾಹಿತ್ಯಾಸಕ್ತರ ನೆರವಿನಿಂದ ಸಮ್ಮೇಳನ ಏರ್ಪಡಿಸಲಾಗುವುದು ಎಂದರು.
ಚಿಕ್ಕ ಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮೊದಲ ಅಂತರ ಜಿಲ್ಲಾ ಸಮ್ಮೇಳನ ಆಯೋಜನೆಗೆ ರಾಜ್ಯ ಕಸಾಪದಿಂದ ಒಪ್ಪಿಗೆ ಪಡೆಯಲಾಗಿದೆ. ಇದಕ್ಕೆ ಹಣಕಾಸಿನ ನೆರವು ನೀಡುವಂತೆ ಒತ್ತಾಯಿಸಲಾಗಿದೆ. ಶೀಘ್ರದಲ್ಲಿ ನಾನಾ ಸಮಿತಿಗಳನ್ನು ರಚಿಸಲಾಗುವುದು. ಸ್ಮರಣ ಸಂಚಿಕೆ ಹೊರತರಲಾಗುವುದು ಎಂದರು.
ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಚಿಕ್ಕಮಗಳೂರು ಕಸಾಪ ಗೌರವ ಸಲಹೆಗಾರರಾದ ಎ.ಸಿ.ಚಂದ್ರಣ್ಣ, ಕೋಶಾಧ್ಯಕ್ಷರಾಗಿ ಚಿತ್ರದುರ್ಗ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಆರ್. ಮಲ್ಲಿಕಾರ್ಜುನರವರನ್ನು ಆಯ್ಕೆ ಮಾಡಲಾಯಿತು.
ಶೀಘ್ರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಚಿತ್ರದುರ್ಗ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಚಿತ್ರದುರ್ಗ ಗೌ.ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಬಿ.ವಿ.ನಾಥ್, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಸಂಘಟನಾ ಕಾರ್ಯದರ್ಶಿ ವಿ.ಶ್ರೀನಿವಾಸ, ಹೊಳಲ್ಕೆರೆ ತಾ.ಕಸಾಪ ಅಧ್ಯಕ್ಷ ಶಿವಮೂರ್ತಿ, ಹೊಸದುರ್ಗ ತಾ.ಕಸಾಪ ಅಧ್ಯಕ್ಷ ಓಂಕಾರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಮಾಜಿ ಗೌ.ಕಾರ್ಯದರ್ಶಿ ಹುರುಳಿ ಬಸವರಾಜ್, ತಾ.ಕಸಾಪ ಮಾಜಿ ಕಾರ್ಯದರ್ಶಿ ಉಪ್ಪಾರಹಟ್ಟಿ ರಮೇಶ್, ಚಿಕ್ಕಮಗಳೂರು ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಜಿ.ಬಿ.ಪವನ್, ತಾ.ಕಸಾಪ ಅಧ್ಯಕ್ಷ ಬಿ.ಹೆಚ್.ಸೋಮಶೇಖರ್, ಕಡೂರು ತಾ.ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ತರೀಕೆರೆ ತಾ.ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ, ನರಸಿಂಹರಾಜಪುರ ತಾ.ಕಸಾಪ ಅಧ್ಯಕ್ಷ ಹೆಚ್.ಎಸ್.ಪೂರ್ಣೇಶ್, ಮೂಡಿಗೆರೆ ತಾ.ಕಸಾ.ಪ ಅಧ್ಯಕ್ಷ ಶಾಂತಕುಮಾರ್, ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾರಾಜಶೇಖರ್, ಗೌ.ಕಾರ್ಯದರ್ಶಿ ರೂಪಾನಾಯಕ್, ಗಾಯತ್ರಮ್ಮ, ಕವಿತಾ ಗೋಪಾಲ್, ರವಿ ದಳವಾಯಿ, ಭಗವಾನ್, ರಂಗಕರ್ಮಿ ಎಸ್.ಕೃಷ್ಣಮೂರ್ತಿ, ಹೆಚ್.ಪಿ.ಮಲ್ಲಿಕಾರ್ಜುನ್, ಶಿವಣ್ಣ, ಚೌಳಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ ಇನ್ನಿತರರು ಉಪಸ್ಥಿತರಿದ್ದರು.