ಬೆಳೆ ಕಟಾವು ಪ್ರಯೋಗದಲ್ಲಿ ಲೋಪ : ಸಂಬಂಧಪಟ್ಟ ಅಧಿಕಾರಿ ವಿರುದ್ದ ಶಿಸ್ತು ಕ್ರಮ : ಎಡಿಸಿ ಬಿ.ಟಿ.ಕುಮಾರಸ್ವಾಮಿ

2 Min Read

 

ಚಿತ್ರದುರ್ಗ. ಆಗಸ್ಟ್. 29: ಬೆಳೆ ಕಟಾವು ಪ್ರಯೋಗದಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 2025-26ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ವಿಮೆ ಮೊತ್ತ, ನಷ್ಟ ಪರಿಹಾರ, ಬೆಂಬಲ ಬೆಲೆ ಘೋಷಣೆಗೆ  ಬೆಳೆ ಕಟಾವು ಪ್ರಯೋಗಗಳೇ ಆಧಾರವಾಗಿವೆ. ಸಮಯಕ್ಕೆ ಸರಿಯಾಗಿ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ, ರೈತರು ಸಮಸ್ಯೆ ಅನುಭವಿಸುತ್ತಾರೆ. ಆದ್ದರಿಂದ  ಬೆಳೆ ಕಟಾವು ಪ್ರಯೋಗ ಮಾಡಲು ನಿಯೋಜಿಸಿದ ಅಧಿಕಾರಿಗಳೇ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ ಪ್ರಯೋಗವನ್ನು ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ಬೆಳೆ ಕಟಾವು ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ಬಾಕಿ ಇರುವ ನಮೂನೆ-1 ಅನ್ನು ಕೂಡಲೇ ಭರ್ತಿ ಮಾಡಬೇಕು. ಎಲ್ಲಾ ಅಧಿಕಾರಿಗಳಿಗೆ ಬೆಳೆ ಕಟಾವು ಕುರಿತು ತರಬೇತಿ ನೀಡಲಾಗಿದೆ. ಆದರೂ ಕೆಲ ಅಧಿಕಾರಿಗಳು ತೂಕದ ಯಂತ್ರ ಹಾಗೂ ಬೆಳೆ ಕಾಣದ ರೀತಿಯಲ್ಲಿ ಫೋಟೋಗಳನ್ನು ಸೆರೆ ಹಿಡಿದು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಇದರಿಂದ ಪ್ರಯೋಗಗಳು ಅನೂರ್ಜಿತವಾಗುತ್ತವೆ. ತೂಕದ ಯಂತ್ರ, ಬೆಳೆ ಹಾಗೂ ತೂಕ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಫೋಟೋ ಸೆರೆ ಹಿಡಿಯಬೇಕು. ಬೆಳೆ ಹಾಗೂ ಉಪ ಬೆಳೆಗಳನ್ನು ನಿರ್ದಿಷ್ಟ ಕಾಲಂಗಳಲ್ಲಿಯೇ ಭರ್ತಿ ಮಾಡಬೇಕು. ಕಳೆದ ವರ್ಷ ಅನೂರ್ಜಿತಗೊಂಡ ಪ್ರಯೋಗಳನ್ನು ಕೈಗೊಂಡ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3,824 ಬೆಳೆ ಕಟಾವು ಪ್ರಯೋಗ ನಡೆಸಲು ಗುರಿ ನಿಗದಿ ಮಾಡಲಾಗಿದೆ. ಇದರಲ್ಲಿ  ಕಂದಾಯ ಇಲಾಖೆಗೆ 1,870,  ಗ್ರಾಮೀಣಾಭಿವೃದ್ಧಿ ಇಲಾಖೆಗೆ 1,202, ಕೃಷಿ ಇಲಾಖೆಗೆ 410, ತೋಟಗಾರಿಕೆ ಇಲಾಖೆಗೆ 342  ಪ್ರಯೋಗಳನ್ನು ಹಂಚಿಕೆ ಮಾಡಲಾಗಿದೆ. ಇದುವರೆಗೆ 1,694 ಪ್ರಯೋಗಳ ನಮೂನೆ-1 ಹಾಗೂ 242 ಪ್ರಯೋಗಗಳ ನಮೂನೆ-2 ಪೂರ್ಣಗೊಂಡಿವೆ. ಬೆಳೆ ಅಂಕಿ ಅಂಶಗಳ ಸುಧಾರಣೆ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ರಾಜ್ಯ ವಲಯದಲ್ಲಿ 32 ಹಾಗೂ ಕೇಂದ್ರ ವಲಯದಲ್ಲಿ 32 ಪ್ರಯೋಗಗಳು ಆಯ್ಕೆಯಾಗಿವೆ. ಈ ಕುರಿತು ಗ್ರಾಮವಾರು ಬೆಳೆ ಕಟಾವು ಪ್ರಯೋಗಕ್ಕೆ ನಿಯೋಜಿಸಿದ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.  ಇದರೊಂದಿಗೆ 2025-26ನೇ ಸಾಲಿನ ಸಕಾಲಿಕ ಬೆಳೆ ಸಮೀಕ್ಷೆ ದತ್ತಾಂಶದ ಶೇ.1% ಪರಿಶೀಲನೆಗೆ ಅಧಿಕಾರಿಗಳನ್ನು ನಿಯೋಜಿಸಿರುವುದಾಗಿ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಮಾಹಿತಿ ನೀಡಿದರು.

ಆರಂಭದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಗಳು ತಡವಾಗಿ ಆರಂಭವಾಗಿವೆ. ಆದ್ದರಿಂದ ಬಹಳಷ್ಟು ಪ್ರಯೋಗಳ ನಮೂನೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ ಎಂದು  ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ತಿಳಿಸಿದರು.

ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *