ನವದೆಹಲಿ: ಕರೋನಾ ‘ಓಮಿಕ್ರಾನ್’ ನ ಹೊಸ ರೂಪಾಂತರವು ವೇಗವಾಗಿ ಹರಡುತ್ತಿದೆ. ಪ್ರತಿದಿನ ಹತ್ತಾರು ಹೊಸ ಪ್ರಕರಣಗಳ ಪತ್ತೆಯಾಗುತ್ತಿವೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹೊಸ ರೂಪಾಂತರದ ಬಗ್ಗೆ ಜಾಗರೂಕರಾಗಿರಲು ಎಲ್ಲಾ ರಾಜ್ಯ ಸರ್ಕಾರಗಳು ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿವೆ. ಮತ್ತು ಒಮಿಕ್ರಾನ್‌ನನ್ನು ಎದುರಿಸಲು ಸಿದ್ಧ ಎಂದು ಹೇಳಿವೆ. ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದರೂ ವಿದೇಶದಿಂದ ಬರುವವರಲ್ಲಿ ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಒಮಿಕ್ರಾನ್ ಸೋಂಕಿತರಲ್ಲಿ ಹೆಚ್ಚಿನವರು ವಿದೇಶದಿಂದ ಬಂದವರು ಎಂಬುದು ಗಮನಾರ್ಹ.
ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 11 ರಾಜ್ಯಗಳಲ್ಲಿ ಇದುವರೆಗೆ 101 ಕೋವಿಡ್ -19 ಸೋಂಕಿನ ಓಮಿಕ್ರಾನ್ ರೂಪಾಂತರದ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್, “ಓಮಿಕ್ರಾನ್ ರೂಪಾಂತರವು ವಿಶ್ವದ 91 ದೇಶಗಳಲ್ಲಿ ವರದಿಯಾಗಿದೆ. ಡೆಲ್ಟಾ ಪರಿಚಲನೆ ಕಡಿಮೆ ಇರುವ ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ ಮತ್ತು ಸಮುದಾಯ ಪ್ರಸರಣ ಸಂಭವಿಸುವ ಡೆಲ್ಟಾ ರೂಪಾಂತರವನ್ನು ಓಮಿಕ್ರಾನ್ ಮೀರಿಸುವ ಸಾಧ್ಯತೆಯಿದೆ ಎಂದು WHO ತಿಳಿಸಿದೆ.
ಶುಕ್ರವಾರ ನವದೆಹಲಿಯಲ್ಲಿ ಹತ್ತು ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20 ಕ್ಕೆ ತಲುಪಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಈ 20 ರಲ್ಲಿ 10 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ವರದಿಯಾಗಿದೆ.
ಅದೇ ರೀತಿ ಶುಕ್ರವಾರ ತೆಲಂಗಾಣದಲ್ಲಿ ಎರಡು ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗುವುದರೊಂದಿಗೆ ಆ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇತ್ತ ಕರ್ನಾಟಕದಲ್ಲಿ ಐದು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಗುರುವಾರ ಒಟ್ಟು 7,974 ಕೋವಿಡ್ -19 ಪ್ರಕರಣಗಳು ಮತ್ತು 343 ಸಾವುಗಳು ದಾಖಲಾಗಿವೆ.
7,948 ಮಂದಿ ಚೇತರಿಸಿಕೊಂಡಿದ್ದು, 87,245 ಸಕ್ರಿಯ ಪ್ರಕರಣಗಲಳು ದಾಖಾಗಿವೆ.