ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಭೀತಿ, ಮತ್ತೊಂದು ಕಡೆ ಒಮಿಕ್ರಾನ್ ಹೆಚ್ಚಳದ ಆತಂಕ. ಈ ಎಲ್ಲದರ ನಡುವೆ ಇದೀಗ ಕ್ರಿಸ್ಮಸ್ ಹಬ್ಬ, ಹೊಸ ವರ್ಷಾಚರಣೆ ಬರ್ತಿದೆ. ವೈರಸ್ ಹೆಚ್ಚಳದ ನಡುವೆ ಆಚರಣೆಗಳು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ನಾಳೆ ಸಚಿವ ಸಂಪುಟದಲ್ಲಿ ಆಚರಣೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
ನಾಳೆ ಸಚಿವ ಸಂಪುಟ ಸಭೆ ಕರೆದಿದ್ದೇನೆ. ಚರ್ಚೆ ನಡೆಸಿ ರಾಜ್ಯಕ್ಕೆ ಬೇಕಾದ ಮಾರ್ಗಸೂಚಿ, ಕ್ರಮಗಳನ್ನು ತರಲಾಗುತ್ತದೆ. ಇನ್ನು ಕೊರೊನಾ ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಇಲ್ಲ. ಇನ್ನು ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗಿದೆ. ಅದೆಲ್ಲದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.
ಶಾಲೆಗಳಿಗೂ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದರ ಬಗ್ಗೆ ಚಿಂತನೆ ನಡೆದಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಪೋಷಕರು ಮಕ್ಕಳನ್ನು ಜಾಗೃತರಾಗಿ ನೋಡಿಕೊಳ್ಳಿ. ಶಾಲೆಯಲ್ಲಿ ಸ್ವಚ್ಛತೆಯನ್ನು ಹಾಗೂ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ವಸತಿ ಶಾಲೆಗಳ ಪರಿಸ್ಥಿತಿಯನ್ನು ಇವತ್ತಿನ ಸಭೆಯಲ್ಲಿ ತಿಳಿದುಕೊಳ್ಳುತ್ತೇನೆ. ಎಲ್ಲಾದನ್ನು ಚರ್ಚಿಸಿ ಮಾರ್ಗಸೂಚಿ ಹೊರಡಿಸಲಾಗುವುದು. ಜೊತೆಗೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಬ್ಬದ ಬಗ್ಗೆಯೂ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.