ಬೆಂಗಳೂರು : ಸರ್ಕಾರದ ಆರೋಗ್ಯ ಸೇವೆ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ತಲುಪದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ (ಡಿಎಚ್‌ಒ) ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಂಗಳವಾರ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೋಟಿಗಟ್ಟಲೇ ಹಣವನ್ನೂ ವೆಚ್ಚ ಮಾಡಲಾಗುತ್ತಿದೆ. ಆದರೂ ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಇಷ್ಟೇಲ್ಲಾ ವ್ಯವಸ್ಥೆ, ಸಿಬ್ಬಂದಿಗಳಿದ್ದು ಏನು ಪ್ರಯೋಜನ? ಜನರಿಗೆ ಉತ್ತರದಾಯಿತ್ವರಲ್ಲದ ಅಧಿಕಾರಿಗಳ ತಲೆದಂಡ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಸಣ್ಣಪುಟ್ಟ ಗೊಂದಲ, ಸಮಸ್ಯೆಗಳನ್ನು ಜಿಲ್ಲಾ ಹಂತದಲ್ಲೇ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಪ್ರತಿ ತಿಂಗಳು ಡಿಎಚ್‌ಒ ಅವರು ಡಿಎಸ್‌ಒ ಮತ್ತು ಇತರೆ ಸಿಬ್ಬಂದಿಗಳ ಸಭೆ ಕರೆದು ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಪ್ರತಿಷ್ಟೆ ಬದಿಗಿಟ್ಟು ಕೆಲಸ ಮಾಡಬೇಕು. ನಿಮ್ಮ ಹಂತದಲ್ಲಿ ಇದು ಸಾಧ್ಯ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಸುವ ಪದ್ಧತಿ ಜಾರಿಗೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
*ವರ್ಗಾವಣೆಗೆ ಕಡಿವಾಣ*
ಈ ವರ್ಷ ಮಾರ್ಗಸೂಚಿ ಅನ್ವಯ ಮಾತ್ರ ವರ್ಗಾವಣೆಗಳನ್ನುಮಾಡಲಾಗುವುದು. ಹಿಂದೆ ನಡೆಯುತ್ತಿದ್ದಂತೆ ಬೇಕಾಬಿಟ್ಟಿ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಒಟ್ಟಾರೆ ವರ್ಗಾವಣೆ ಪ್ರಮಾಣ ಶೇಕಡಾ 15 ಮೀರದಂತೆ ಎಚ್ಚರವಹಿಸಲಾಗುವುದು. ಕೆಲವರು ಬೆಂಗಳೂರು ನಗರ ಬಿಟ್ಟು ಹೋಗುತ್ತಿಲ್ಲ. ಹತ್ತು ವರ್ಷ ಒಂದೇ ಸ್ಥಳದಲ್ಲಿ ಯಾರಾದರೂ ಇದ್ದರೆ ಅಂತಹ ಹುದ್ದೆಗಳನ್ನು ಖಾಲಿ ಎಂದು ಬೇರೆ ನೇಮಕ ಮಾಡಲಾಗುವುದು. ಜತೆಗೆ ನಗರದೊಳಗೆ ಪರಸ್ಪರ ವರ್ಗಾವಣೆ ಕೋರುವ ಪ್ರಕರಣಗಳನ್ನೂ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಸೂಚನೆ ನೀಡಿರುವಂತೆ ಪ್ರತಿ ಬುಧವಾರ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆ ಮತ್ತು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲ ಅಧಿಕಾರಿಗಳು ಅನುದಿನದ ಕಾರ್ಯ ನಿರ್ವಹಣೆ ಬಗ್ಗೆ ಡೈರಿ ನಿರ್ವಹಿಸುವುದು ಕಡ್ಡಾಯ. ಇನ್ನು ಮುಂದೆ ಅನಿರೀಕ್ಷಿತ ಭೇಟಿ ಮೂಲಕ ಇದನ್ನು ಪರಿಶೀಲಿಸಲಾಗುವುದು. ಈ ಸೂಚನೆಗಳನ್ನು ಪಾಲಿಸದವರ ವಿರುದ್ಧ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.