ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ : 25 ಮಂದಿಗೆ ಶಿಕ್ಷೆ…!

2 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆಂಬ ಆರೋಪದ ಮೇಲೆ 25 ಮಂದಿ ಆರೋಪಿಗಳಿಗೆ ಚಿತ್ರದುರ್ಗ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು 02 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ತಲಾ 7,000/- ರೂ ದಂಡ ವಿಧಿಸಿ ತೀರ್ಪು ವಿಧಿಸಿದೆ.

ಘಟನೆಯ ಹಿನ್ನೆಲೆ :
30.04.2018 ರಂದು ಸಂಜೆ 5.30 ಗಂಟೆಗೆ ಹಿರಿಯೂರು ನಗರದಿಂದ ಬಾಲಕಿಯನ್ನು ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಕರೆದುಕೊಂಡು ಬಂದಿದ್ದು, ಬಾಲಕಿಗೆ ಚಿಕಿತ್ಸೆ ಸರಿಯಾಗಿ ನೀಡಿಲ್ಲವೆಂದು ರಾತ್ರಿ 08.00 ಗಂಟೆ ಸಮಯದಲ್ಲಿ 25 ಜನ ಆರೋಪಿಗಳು ಗೇಟ್ ಬಳಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಹಿಡಿದುಕೊಂಡು ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸ್ರೋ ಹೋಡಿಯಿರೋ ಅಂತಾ ಪ್ರಚೋದಿಸಿ ಬೈದಾಡುತ್ತಾ ಪ್ರತಿಭಟಿಸಿದ್ದರು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಇದು ಆಸ್ಪತ್ರೆ ಇಲ್ಲಿ ಯಾರೂ ಗಲಾಟೆ ಮಾಡಬಾರದು ಆಸ್ಪತ್ರೆ ರೋಗಿಗಳಿಗೆ ತೊಂದರೆಯಾಗುತ್ತದೆ ಗೇಟ್ ನಿಂದ ಹೊರಹೋಗಿ ಎಂದು ಎಷ್ಟು ತಿಳಿ ಹೇಳಿದರು ಕೂಡಾ ಗೇಟ್‌ ನಿಂದ ಹೊರಬಂದು ತುರ್ತು ಚಿಕಿತ್ಸೆಗಾಗಿ ಬರುತ್ತಿದ್ದ ಆಂಬುಲೆನ್ಸ್‌ ಗೆ ಕಲ್ಲು ತೂರಿ ಹೊಡೆದು ನಷ್ಟ ಉಂಟು ಮಾಡಿರುತ್ತಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು 25 ಜನರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಮುಂದುವರಿದ ಭಾಗವಾಗಿ ಚಿತ್ರದುರ್ಗ ನಗರ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಶ್ರೀಮತಿ ಯಶೋಧಮ್ಮ ಮಪಿಎಸ್‌ಐ ರವರು ತನಿಖೆ ಪೂರೈಸಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ದಿನಾಂಕ:10.12.20218 ರಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಚಿತ್ರದುರ್ಗದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು ಈ ಪ್ರಕರಣದ ತನಿಖೆ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂದು (ದಿನಾಂಕ:24.01.2026) ನ್ಯಾಯಾದೀಶರಾದ ರೋಣ ವಾಸುದೇವ್ ಅವರು 25 ಜನ ಆರೋಪಿತರಿಗೆ 02 ತಿಂಗಳ ಕಾರಾಗೃಹ ಶಿಕ್ಷೆ ತಲಾ 7,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರಿ ಅಭಿಯೋಜಕರಾದ ಮಲ್ಲಯ್ಯ ಅವರು ವಾದ ಮಂಡಿಸಿದ್ದರು.

ಈ ಬಗ್ಗೆ ಪ್ರಕರಣದಲ್ಲಿ ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆ ಆಗುವಂತೆ ಕಾರ್ಯ ನಿರ್ವಹಿಸಿದ ಚಿತ್ರದುರ್ಗ ನಗರ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಕೋರ್ಟ್ ಮಾನಿಟರಿಂಗ್‌ಸೆಲ್ ವಿಭಾಗದವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Share This Article