ಸುದ್ದಿಒನ್, ಚಿತ್ರದುರ್ಗ, ಏ. 05, ಚಿತ್ರದುರ್ಗದಲ್ಲಿ ಪ್ರಥಮ ಬಾರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ರೋಗ ತಜ್ಞರ ಸಂಘದ ಸಹಯೋಗದಲ್ಲಿ ಐದನೇ ಯುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಎರಡು ದಿನಗಳ ಸಮ್ಮೇಳನ ಇಂದು ವಿದ್ಯುಕ್ತವಾಗಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರಂಭಗೊಂಡಿತು.

ಸಮ್ಮೇಳನವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಉದ್ಘಾಟಿಸಿ, ಮಾತನಾಡಿ ಅಪರೂಪದ ಈ ಸಮ್ಮೇಳನವು ಚಿತ್ರದುರ್ಗದಲ್ಲಿ ಅದು ನಮ್ಮ ಎಸ್.ಜೆ.ಎಂ. ವಿದ್ಯಾಪೀಠದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ವಿಭಾಗದಲ್ಲಿ ವೈದ್ಯರುಗಳು ಸಂಶೋಧನೆಗಳನ್ನು ಹೆಚ್ಚಿನ ರೀತಿಯಲ್ಲಿ ನಡೆಸಲಿ ಅದಕ್ಕೆ ಎಲ್ಲ ಸಹಕಾರವನ್ನು ನಮ್ಮ ವೈದ್ಯಕೀಯ ಸಂಸ್ಥೆಯು ನೀಡಲಿದೆ ಎಂದು ನುಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯರಾದ ಡಾ. ಪಿ.ಎಸ್. ಶಂಕರ್ ಅವರು ಮಾತನಾಡಿ, ಈ ವಿಭಾಗದಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳು ನಡೆಯಲಿ. ಅದಕ್ಕೆ ಯುವ ವೈದ್ಯರು ಸ್ಪಂದಿಸಿ ಹೆಜ್ಜೆ ಇಡಲಿ ಎಂದು ಆಶಿಸಿದರು. 5 ಮತ್ತು 6 ಅಂದರೆ ಇಂದು ಮತ್ತು ನಾಳೆ ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಆಗಿರುವ ಆಧುನಿಕ ಹೊಸ ಬೆಳವಣಿಗೆಗಳನ್ನು ಕುರಿತು ತಜ್ಞರು ಚಿಂತನ ಮಂಥನದ ಮೂಲಕ ವಿಶ್ಲೇಷಣೆ ಮಾಡಲಿದ್ದಾರೆ.
ಈ ಸಮ್ಮೇಳನದಲ್ಲಿ ಪರಸ್ಪರ ವಿಚಾರ ವಿನಿಮಯದೊಂದಿಗೆ ತಾಯಿಮರಣ ಹಾಗೂ ಶಿಶು ಮರಣವನ್ನು ಕಡಿಮೆ ಮಾಡುವುದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಮಾಹಿತಿಯನ್ನು ಸಾಮಾನ್ಯ ಜನರಿಗೆ ಯಾವ ರೀತಿ ತಿಳಿಯಪಡಿಸಬೇಕು ಎಂಬ ಕುರಿತಂತೆ ಚಿಂತಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಬಸವೇಶ್ವರ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ|| ಲತಾ, ಡಾ|| ಗೀತಾ, ಕಾಲೇಜಿನ ಡೀನ್ ಡಾ|| ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ|| ಎಂ.ಎಸ್. ರಾಜೇಶ್, ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಹಿಂದಿನ ಅಧ್ಯಕ್ಷರಾದ ಡಾ|| ಭಾರತಿ ರಾಜಶೇಖರ್, ಹಾಲಿ ಅಧ್ಯಕ್ಷರಾದ ಡಾ|| ದುರ್ಗಾದಾಸ್, ಕಾರ್ಯದರ್ಶಿಗಳಾದ ಡಾ|| ರಾಜಶ್ರೀ ಪಲ್ಲುಡಿ ಮೊದಲಾದವರಿದ್ದರು.
5ರಂದು ಹಿಸ್ಟೆರೋಸ್ಕೋಪಿ, 6ರಂದು ಪೆರಿನೆಟಾಲಜಿ ಕುರಿತಾದ ಕಾರ್ಯಾಗಾರ ನಡೆಯಲಿದೆ. ಸಮ್ಮೇಳನದಲ್ಲಿ ರಾಜ್ಯದಾದ್ಯಂತ ಸುಮಾರು 250 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ 210 ಸ್ನಾತಕೋತ್ತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಡಾ. ಲಕ್ಷ್ಮಿ ಪ್ರಶಾಂತ್ ಹಾಗೂ ಡಾ. ರಶ್ಮಿ ಅವರು ಕಾರ್ಯಕ್ರಮ ನಿರ್ವಹಿಸಿದರು.

