ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.28) : ದೇಶದ ಕಟ್ಟ ಕಡೆಯ ಮನುಷ್ಯನಿಗೆ ಪೌಷ್ಠಿಕಾಂಶ ಆಹಾರ ತಲುಪಬೇಕಾಗಿರುವುದರಿಂದ ಆಹಾರದ ಉತ್ಪಾದನೆ ಹೆಚ್ಚಾಗಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು.
ಎ.ಪಿ.ಎಂ.ಸಿ.ಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ನಡೆದ ವಿಶ್ವ ಆಹಾರ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
1945 ಅ.16 ರಂದು ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ಅ.ತಿಂಗಳಿನಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಬ್ಬರಿಗೂ ಆಹಾರದ ಮಹತ್ವ ಅರಿಯಬೇಕು. ದೇಶದಲ್ಲಿ 316 ಮಿಲಿಯನ್ ಟನ್ ಆಹಾರ ಒಂದು ವರ್ಷಕ್ಕೆ ಉತ್ಪತ್ತಿಯಾಗುತ್ತಿದೆ. ರಾಜ್ಯದಲ್ಲಿ 137 ಮಿ.ಟನ್ ಆಹಾರ ಉತ್ಪಾದನೆಯಾಗುತ್ತಿದ್ದು, ಕಳೆದ ಮುಂಗಾರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ರೈತರ ಬೆಳೆಗಳು ನಾಶವಾಗಿರುವುದಕ್ಕೆ 99.23 ಕೋಟಿ ರೂ.ಜಿಲ್ಲೆಯ ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ಹೇಳಿದರು.
ಆಹಾರ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಪಾತ್ರ ಪ್ರಮುಖವಾದುದು. ಹಾಗಾಗಿ ಕಟ್ಟ ಕಡೆಯ ಮನುಷ್ಯನಿಗೂ ಪೌಷ್ಠಿಕಾಂಶ ತಲುಪಬೇಕು ಎಂದರು.
ಹಾಸನ ಕೃಷಿ ಕಾಲೇಜಿನ ನಿವೃತ್ತ ಡೀನ್ ಡಾ.ಎಲ್.ಮಂಜುನಾಥ್ ಮಾತನಾಡಿ ಅನ್ನ, ನೀರು, ಗಾಳಿ ಎಲ್ಲರ ಜೀವನಕ್ಕೂ ಮುಖ್ಯ ಆಧಾರ. ವಿಶ್ವದ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಪೌಷ್ಠಿಕಾಂಶ ಒದಗಿಸುವುದು ಕೃಷಿ ತಂತ್ರಜ್ಞರ ಸಂಸ್ಥೆಯ ಉದ್ದೇಶ. ಇದಕ್ಕಾಗಿ ಆಹಾರ ಸ್ಪರ್ಧೆ, ಮ್ಯಾರಾಥಾನ್ ಓಟ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಆಹಾರದಿಂದ ಯಾರು ವಂಚಿತರಾಗಬಾರದು ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾದಿಂದ ಮುಂದುವರೆದ ದೇಶಗಳು ಸಾಕಷ್ಟು ಬಿಕ್ಕಟ್ಟನ್ನು ಎದುರಿಸುತ್ತಿವೆ. ವಿಶ್ವದಲ್ಲಿ 237 ಮಿಲಿಯನ್ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದರು.
ಹಸಿವಿನಿಂದ ಯಾರು ನರಳಿ ಸಾಯಬಾರದೆಂದು 2013 ರಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೆ ತರಲಾಯಿತು. ಬಡವರಿಗೆ ಅನ್ನ ನೀಡುವುದಕ್ಕಾಗಿ 3.91 ಲಕ್ಷ ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಆದರೂ ಹಸಿವು, ಬಡತನ ಇನ್ನು ಜೀವಂತವಾಗಿರುವುದನ್ನು ಪ್ರತಿಯೊಬ್ಬರು ಗಂಭೀರವಾಗಿ ಚಿಂತಿಸಬೇಕಿದೆ. ರೈತ, ಒಕ್ಕಲುತನ ಉಳಿದರೆ ಮಾತ್ರ ಜಗತ್ತು ಉಳಿಯಲು ಸಾಧ್ಯ. ಒಕ್ಕಲುತನ ಎಂದರೆ ಸಂಸ್ಕøತಿ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅಡಕೆ ಬೆಳೆಯುತ್ತಿದ್ದಾರೆ. ಇದರಿಂದ ಮನೆ ಮನೆಗೆ ಗುಟ್ಕ ತಲುಪುತ್ತಿದೆ. ಯುವ ಪೀಳಿಗೆಯಂತು ಗುಟ್ಕಾಗೆ ಬಲಿಯಾಗುತ್ತಿದೆ. ಕೃಷಿ ಭೂಮಿಗಳೆಲ್ಲಾ ನಿವೇಶನ, ಕಟ್ಟಡಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಸೇವನೆಗೆ ದವಸ ಧಾನ್ಯಗಳು ಸಿಗುವುದು ಕಷ್ಟವಾಗುವುದರಲ್ಲಿ ಅನುಮಾನವಿಲ್ಲ. ವಿವೇಚನೆಯಿಲ್ಲದ ತಂತ್ರಜ್ಞಾನ ಅಳವಡಿಸಿಕೊಂಡಾಗ ಒಂದಲ್ಲ ಒಂದು ದಿನ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ಮೂಲಕ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಆಗ ಮಾತ್ರ ಎಲ್ಲರೂ ಪೌಷ್ಠಿಕಾಂಶ ಸೇವಿಸಿ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯ ಎಂದು ನುಡಿದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಜಿ.ಸಿ.ರಂಗಸ್ವಾಮಿ, ಕಾರ್ಯದರ್ಶಿ ಜಿ.ಟಿ.ವೀರಭದ್ರರೆಡ್ಡಿ, ಜಂಟಿ ಕಾರ್ಯದರ್ಶಿ ಜಿ.ವೆಂಕಟೇಶ್, ಖಜಾಂಚಿ ಡಾ.ಸಿ.ತಿಪ್ಪೇಸ್ವಾಮಿ, ಸದಸ್ಯರುಗಳಾದ ಕಟ್ಟಾ ಶ್ರೀನಿವಾಸರೆಡ್ಡಿ, ಎನ್.ಮೂರ್ತಿನಾಯ್ಕ, ಹೆಚ್.ಎಸ್.ಮಂಜುನಾಥ, ಟಿ.ಆರ್.ಯಶವಂತಕುಮಾರ್ ವೇದಿಕೆಯಲ್ಲಿದ್ದರು.
ಅಂರ್ತಜಲ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ, ಡಾ.ಪ್ರಕಾಶ್ ಕೆರೂರ್, ಎಸ್.ಹನುಮಂತರಾಯರೆಡ್ಡಿ, ಎಸ್.ಚಂದ್ರಯ್ಯ ಇವರುಗಳನ್ನು ಸನ್ಮಾನಿಸಲಾಯಿತು.