ಚಿತ್ರದುರ್ಗ. ಮಾರ್ಚ್, 26 : ಕ್ಷಯರೋಗಿಗಳಿಗೆ ಪೋಷಕಾಂಶಯುಕ್ತ ಆಹಾರ ಅತ್ಯವಶ್ಯಕವಾಗಿದ್ದು, ದಾನಿಗಳು ಮುಂದೆ ಬನ್ನಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಕ್ಷಯರೋಗದ ಬಗ್ಗೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷಯರೋಗಿಗಳಿಗೆ ಅವರ ಚಿಕಿತ್ಸಾ ಅವಧಿಯಲ್ಲಿ ಹೈಯರ್ ಆಂಟಿಬಯೋಟಿಕ್ ಡ್ರಗ್ಸ್ ಬಳಸುತ್ತಿರುವುದರಿಂದ ಪೋಷಕಾಂಶಗಳು ಹೆಚ್ಚಾಗಿರುವ ಆಹಾರ ಪೂರೈಕೆ ಮಾಡಲೆಂದು ನಿಕ್ಷಯ್ ಮಿತ್ರ ಯೋಜನೆಯಡಿಯಲ್ಲಿ ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ನಿಮಗೆ ನೀಡಿರುವ ಆಹಾರ ಬುಟ್ಟಿಗಳ ಉಪಯೋಗ ಸಮರ್ಪಕವಾಗಿ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಕ್ಷಯರೋಗ ಮುಕ್ತ ಮಾಡಲು ಸರ್ಕಾರ ಕ್ಷಯರೋಗ ಪ್ರಕರಣಗಳ ಮನೆ ಸಂಪರ್ಕಿಗಳಿಗೆ, ವಯೋವೃದ್ಧರಿಗೆ, ಶಾಲಾ ಮಕ್ಕಳಿಗೆ ಮತ್ತು ದೀರ್ಘ ಕಾಲದ ಸಹವರ್ತಿ ರೋಗಗಳನ್ನು ಹೊಂದಿರುವವರಿಗೆ ಬಿ.ಸಿ.ಜಿ. ಲಸಿಕೆ ನೀಡಲು ಯೋಜನೆ ತಯಾರಿಸುತ್ತಿದೆ. ಪ್ರಾಯೋಗಿಕವಾಗಿ ಆರೋಗ್ಯ ಸಚಿವರು ಈಗಾಗಲೇ ಚಾಲನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತದೆ. ಎಲ್ಲರು ಕ್ಷಯಮುಕ್ತ ಸಮಾಜ ಕಟ್ಟುವಲ್ಲಿ ಸಹಕರಿಸಿ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ನಿಕ್ಷಯ ಮಿತ್ರ ಚಟುವಟಿಕೆ, ಜಾನ್ ಮೈನ್ಸ್ ಸಹಯೋಗದೊಂದಿಗೆ ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಬುಟ್ಟಿಗಳನ್ನು 35 ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಾನ್ ಮೈನ್ಸ್ ವ್ಯವಸ್ಥಾಪಕ ಅಜಿತ್, ವೈದ್ಯಾಧಿಕಾರಿಗಳಾದ ಡಾ.ತುಳಸಿ ರಂಗನಾಥ, ಡಾ.ಪವಿತ್ರ, ಡಾ.ಬಿಂದ್ಯಾ, ಡಾ.ಶಿಲ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಮುದಾಯ ಆರೋಗ್ಯಾಧಿಕಾರಿ ಯಶಸ್ವಿನಿ, ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್, ಶುಶ್ರೂಷಕಾಧಿಕಾರಿ ನಾಗವೇಣಿ, ರತ್ನಮ್ಮ, ಮಂಜುಳಾ, ಜಿಲ್ಲಾ ಕ್ಷಯರೋಗ ಮೇಲ್ವಿಚಾರಣಾ ಅಧಿಕಾರಿ ಮಹೇಂದ್ರಕುಮಾರ್, ಮಾರುತಿ, ಆಶಾ ಕಾರ್ಯಕರ್ತೆಯರು ಇದ್ದರು.

