ಬೆಂಗಳೂರು: ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆಯೆಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಕಾಮಗಾರಿಗಳ ನಿರ್ವಹಣೆ ಮಾಡದೆಯೇ 62.86 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಆರೋಪಿಸಿದ್ದು, ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಅವರು ಆಗ್ರಹಿಸಿದ್ದಾರೆ.
ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ಚಲ್ಲಘಟ್ಟ, ವೃಷಭಾವತಿ, ಕೋರಮಂಗಲ ಮತ್ತು ಹೆಬ್ಬಾಳ ಸಂಬಂಧಿಸಿದ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು JNURM ಅಡಿಯಲ್ಲಿ ಒಟ್ಟು 496.90 ಕೋಟಿ ಮೊತ್ತದ ಅನುದಾನದಲ್ಲಿ 15 ಪ್ಯಾಕೇಜ್‌ಗಳ ಮೂಲಕ 2005-2006ರಲ್ಲಿ ಕೈಗೊಳ್ಳಲಾಗಿತ್ತು.
ರಾಜಕಾಲುವೆಗಳ ಮರು ನಿರ್ಮಾಣ, ಪ್ರವಾಹ ನಿರ್ವಹಣೆ ಮತ್ತು ಕೊಳಚೆ ನೀರು ಮಾರ್ಗ ಬದಲಾವಣೆ ಎಂಬ ಹೆಸರಿನಲ್ಲಿ ಈ 15 ಪ್ಯಾಕೇಜ್ಗಳ ಕಾಮಗಾರಿ ಕೈಗೊಳ್ಳಲಾಗಿತ್ತು.
ಈ 15 ಪ್ಯಾಕೇಜ್ಗಳ ಒಟ್ಟು 496.90 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಬೆಂಗಳೂರು ನಗರ ಪ್ರದೇಶದಲ್ಲಿ ಮಳೆ ನೀರು ನಿರ್ವಹಣೆಯ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯನ್ನು 2021ರಲ್ಲಿ ಸಲ್ಲಿಸಿದ್ದಾರೆ.
ಆದ್ರೆ ರಾಜಕಾಲುವೆ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಅನೇಕ ವಂಚನೆಗಳು ನಡೆದಿವೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.