ಬೆಂಗಳೂರು : ಕರ್ನಾಟಕದಲ್ಲಿ ದಲಿತ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ ಎಂದು ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜು ತಮ್ಮ ಸಾಮಾಜಿಕ ಜಾಲತಾಣದ ಫೇಸ್‌ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಲು ಇದು ಸಹಕಾರಿಯಾಗಲಿದೆ.ಮಲ್ಲಿಕಾರ್ಜುನ ಖರ್ಗೆ ಪ್ರಶ್ನಾತೀತ ನಾಯಕ. ಅವರು ಯಾವತ್ತೂ ಯಾವುದೇ ಹುದ್ದೆಯನ್ನು ಅರಸಿ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಮನ್ನಣೆ ಗಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುವ ಆಸೆ ಹೊಂದಿದ್ದಾರೆ. ಆದರೆ ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಮುಖ್ಯಮಂತ್ರಿ ಆಗಿರುವುದರಿಂದ ಮತ್ತೊಮ್ಮೆ ಅದೇ ಅಧಿಕಾರಕ್ಕಾಗಿ ಪಕ್ಷದ ಮೇಲೆ ಒತ್ತಡ ಹೇರುವುದು ಅಧಿಕಾರದ ದಾಹವಾಗುತ್ತದೆ.
ಡಿಕೆ ಶಿವಕುಮಾರ್ ಅವರು ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿ ಹುದ್ದೆ ಬಯಸುವುದರಲ್ಲಿ ತಪ್ಪೇನಿಲ್ಲ. ಆದರೆ, ದಲಿತ ನಾಯಕರೊಬ್ಬರನ್ನು ರಾಜ್ಯದ ಮೊದಲ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲು ಡಿಕೆಶಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ.
ಅಹಿಂದ ಮಂತ್ರ ಜಪಿಸುತ್ತಿರುವ ಸಿದ್ದರಾಮಯ್ಯ ಅವರಾದರೂ ದಲಿತರ ಐತಿಹಾಸಿಕ ಋಣ ತೀರಿಸುವ ಕ್ಷಣದಲ್ಲಿ ಪಾಲ್ಗೊಳ್ಳಬೇಕು. ಮತ್ತೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಆಸೆ ಇಟ್ಟುಕೊಳ್ಳುವ ಬದಲು ಖರ್ಗೆಯವರ ಹೆಸರನ್ನು ಪ್ರಸ್ತಾಪಿಸಿ ದೊಡ್ಡ ಮನಸ್ಸು ಮಾಡಬೇಕು ಎಂದು ತ್ಯಾಗರಾಜು ಹೇಳಿದ್ದಾರೆ.
ಖರ್ಗೆಯವರು, ಪಕ್ಷದ ನಿಷ್ಠಾವಂತ ವ್ಯಕ್ತಿ, ಶಿಸ್ತಿನ ಸಿಪಾಯಿ ಮತ್ತು ವ್ಯಕ್ತಿ ಪೂಜೆಗೆ ವಿರುದ್ಧ. ಖರ್ಗೆಯವರು ಈ ನಾಡಿನಲ್ಲಿ ಘನತೆ ಗೌರವ ಗಳಿಸಿದ ಅಪರೂಪದ ನಾಯಕ.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಚರ್ಚೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪವಾಗೆದೆ ಎಂದು ವಿಶ್ವಾಸಾರ್ಹ ಮೂಲಗಳ ಮೂಲಕ ತಿಳಿದುಬಂದಿದೆ.
ಅದಕ್ಕಾಗಿಯೇ ಖರ್ಗೆ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬರೆದಿದ್ದೇನೆ ಎಂದು ತ್ಯಾಗರಾಜು ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವುದು ಇದೀಗ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.