ಚಿತ್ರದುರ್ಗ . ಆ.29: ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ಪ್ರಸ್ತುತ ಮಾಹೆಯಲ್ಲಿ ರಾಜ್ಯದಲ್ಲಿ ಶೇ.99 ರಷ್ಟು ಮಳೆ ಕೊರತೆಯಾಗಿದೆ.
130 ತಾಲೂಕುಗಳ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೆ.30 ರಂದು ವರದಿ ಸರ್ಕಾರ ಕೈ ಸೇರಲಿದೆ. ಇದನ್ನು ಆಧರಿಸಿ ಬರ ಘೋಷಣೆ ಕುರಿತು ಸೆಪ್ಟೆಂಬರ್ ಮೊದಲ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವನಾರಾಯಣಸ್ವಾಮಿ ಹೇಳಿದರು.
ಮಂಗಳವಾರ ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಂಡ ಅವರು, ತಾಲ್ಲೂಕಿನ ವಿಜಯಪುರ ಹಾಗೂ ಲಕ್ಷ್ಮೀಸಾಗರ ಗ್ರಾಮದ ಜಮೀನುಗಳಿಗೆ ಭೇಟಿ, ಮಳೆ ಕೊರೆತೆಯಿಂದ ಹಾನಿಗೆ ಒಳಗಾದ ಮೆಕ್ಕೆಜೋಳ, ಶೇಂಗಾ ಹಾಗೂ ರಾಗಿ ಬೆಳೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.93 ರಷ್ಟು ಬಿತ್ತನೆಯಾಗಿದೆ. ಆದರೆ ಸಂಪೂರ್ಣವಾಗಿ ಮಳೆ ಕೈಕೊಟ್ಟಿದೆ. ಶೇ.30 ರಷ್ಟು ಮಳೆ ಕೊರತೆ ಕಂಡುಬಂದರೆ ಬರ ಎಂದು ಘೋಷಣೆ ಮಾಡಲಾಗುತ್ತದೆ. ವಾಸ್ತವ ಸ್ಥಿತಿ ತಿಳಿಯುವ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಂತರ್ ಇಲಾಖೆ ವರದಿ ನೀಡಲು ಸೂಚನೆ ನೀಡಲಾಗಿದೆ. ಬರದಿಂದ ಸಂಕಷ್ಟದಲ್ಲಿ ಇರುವ ರೈತರ ನೆರವಿಗೆ ಸರ್ಕಾರ ಸಿದ್ಧವಿದೆ. ಸರ್ಕಾರದ ಮಟ್ಟದಲ್ಲೂ ಶಾಸಕರು ಹಾಗೂ ಹಲವು ಮಂತ್ರಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ.
ಮೊದಲಿನಿಂದಲೂ ಚಿತ್ರದುರ್ಗ ಕಡಿಮೆ ಮಳೆ ಬೀಳುವ ಪ್ರದೇಶ. ರಾಜ್ಯದ ಮಧ್ಯೆ ಭಾಗದಲ್ಲಿ ಇರುವ ಜಿಲ್ಲೆಯ ರೈತರ ಸ್ಥಿತಿ ಅರಿಯುವ ಸಲುವಾಗಿಯೇ, ಜಿಲ್ಲಾ ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ. ವಾಸ್ತವ ವರದಿ ಬಂದ ನಂತರ ಬರ ಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಲಿದೆ. ಬರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 2 ತಾಲ್ಲೂಕುಗಳು ಬಿಟ್ಟು ಹೋಗಿದ್ದರೆ ಪರೀಶಿಲಿಸಿ ಸೇರಿಸಲಾಗುವುದು. ಮಾರ್ಗ ಸೂಚಿಗಳ ಅನುಸಾರ ಯಾವ ತಾಲ್ಲೂಕುಗಳಲ್ಲಿ ಬರ ಲಕ್ಷಣಗಳು ಕಂಡುಬರುತ್ತದೆ ಅವುಗಳನ್ನು ಬರ ತಾಲ್ಲೂಕು ಎಂದು ಘೋಷಣೆ ಮಾಡಲಾಗುವುದು. ಸರ್ಕಾರ ರಾಜ್ಯದ 6.5 ಕೋಟಿ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತದೆ. ಬೆಳೆ ಪರಿಹಾರದ ಹಣ ತಾಂತ್ರಿಕ ಕಾರಣದಿಂದ ಬೇರೆಯವರ ಖಾತೆಗೆ ಜಮೆ ಆಗಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ ಪ್ರತಿ ದಿನ 5000 ಕ್ಯೂಸೆಕ್ಸ್ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವಂತೆ ಹೇಳಿದೆ. ಸರ್ಕಾರ ಇದಕ್ಕೆ ಒಪ್ಪಿಲ್ಲ. ಸರ್ವೋಚ್ಚ ನ್ಯಾಯಾಲಯ ಹಾಗೂ ನಿಯಂತ್ರಣ ಪ್ರಾಧಿಕಾರದ ನಡುವಿನ ಕೊಂಡಿಯಂತೆ ನಿರ್ವಹಣಾ ಪ್ರಾಧಿಕಾರ ಕೆಲಸ ನಿರ್ವಹಿಸುತ್ತದೆ. ಈ ಸಭೆಯ ನಿರ್ಣಯ ಆಧರಿಸಿ ತಾಂತ್ರಿಕ ಪರಿಣಿತರಿಂದ ಸಲಹೆ ಪಡೆದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮುಂದಿನ ಕ್ರಮ ಕೈಗೊಳ್ಳುವರು ಎಂದು ಮಾಧ್ಯಮಮದವರ ಪ್ರಶ್ನೆಗೆ ಸಚಿವ ಚಲುವನಾರಾಯಣಸ್ವಾಮಿ ಉತ್ತರಿಸಿದರು.
ಕೇಂದ್ರ ಸರ್ಕಾರಕ್ಕೆ ಬರಗಲಾದ ನಿಯಮಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವ ಮಾರ್ಗ ಸೂಚಿಗಳಲ್ಲಿ ಕೂಡ ಸರಳತೆ ತರಲು ಯೋಚಿಸಲಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದು ಈ ವೇಳೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೇರಿದಂತೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.