ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆ ಜೋರಾಗಿದೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದೇ ಒತ್ತಾಯ ಹಾಕುತ್ತಿದ್ದಾರೆ. ಆದರೆ ಇದರ ನಡುವೆ ಮತ್ತೆ ಮುಂದಿನ 18 ದಿನಗಳ ಕಾಲ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚನೆ ನೀಡಲಾಗಿದೆ.
ಹದಿನೈದು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ನಾಳೆಗೆ ಆ ಆದೇಶ ಅಂತ್ಯವಾಗುತ್ತಿತ್ತು. ಆದರೆ ಈ ಬೆನ್ನಲ್ಲೇ ಇಂದು ನಡೆದ ಸಭೆಯಲ್ಲಿ ಮುಂದಿನ 18 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಲಾಗಿದೆ. ಅಕ್ಟೋಬರ್ 15 ರ ತನಕ ನೀರು ಬಿಡಲು ಕಾವೇರಿ ಪ್ರಾಧಿಕಾರ ಆದೇಶ ನೀಡಿದೆ.
ಇಂದು ನಡೆದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ನೀರಿನ ಅಭಾವದ ಬಗ್ಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶೇಕಡ 33% ರಷ್ಟು ಮಳೆಯ ಕೊರತೆ ಇದೆ. ಕಾವೇರಿ ಭಾಗದ 16 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕಾವೇರಿ ಕಣಿವೆಯಲ್ಲಿ ಸದ್ಯಕ್ಕೆ ಕೇವಲ 49 ರಷ್ಟು ಮಾತ್ರ ನೀರು ಇದೆ. ಈಗ ಮಳೆಯೇ ಬಾರದೆ ಇದ್ದರೆ, ತಮಿಳುನಾಡಿಗೆ ನೀರು ಬಿಟ್ಟರೆ, ಕರ್ನಾಟಕದ ಜನತೆಗೆ ಕುಡಿಯುವ ನೀರಿಗೂ ಬರ ಬರಲಿದೆ ಎಂದು ತಿಳಿಸಿದ್ದಾರೆ. ಆದರೂ ತಮಿಳುನಾಡಿಗೆ ನೀರು ಬಿಡಲೇಬೇಕೆಂದು ಸೂಚನೆ ನೀಡಲಾಗಿದೆ.