ಕರ್ನಾಟಕದಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಬೆಳೆ ಅಂತು ಅನುಮಾನ, ಕುಡಿಯುವುದಕ್ಕೂ ನೀರಿಗೆ ಹಾಹಾಕಾರ ಶುರುವಾದರೆ ಹೇಗೆ ಎಂಬ ಚಿಂತನೆಯಲ್ಲಿದ್ದಾರೆ. ಇದರ ನಡುವೆ ತಮಿಳುನಾಡು ಮಾತ್ರ ತನ್ನ ಕ್ಯಾತೆ ಮುಂದುವರೆಸಿದೆ. ನಮಗೆ ನೀರು ಬೇಕೆ ಬೇಕು ಎಂಬ ಹಠ ಮಾಡಿದೆ. ತಮಿಳುನಾಡಿನ ಪರವೇ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಇದೀಗ ಅನುಮತಿ ನೀಡಿದೆ.
ಕರ್ನಾಟಕಕ್ಕೆ ಪ್ರಾಧಿಕಾರ ಸೂಚನೆ ನೀಡಿದ್ದು, ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸೂಚಿಸಿದೆ. ಮುಂದಿನ 15 ದಿನ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ಹರಿಸುವಂತೆ ತಿಳಿಸಿದೆ. ತಮಿಳುನಾಡಿನ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 5000 ಕ್ಯೂಸೆಕ್ ದಾಖಲಾಗಬೇಕು. ಹೀಗಾಗಿ ನೀರು ಹರಿಸಲು ಸೂಚಿಸಿದೆ. ಈ ಹಿಂದೆ 15 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸಿತ್ತು. ಸದ್ಯ ಅದನ್ನು 10 ಸಾವಿರಕ್ಕೆ ಇಳಿಸಿದೆ.
ಇನ್ನು ನಾಳೆ ಈ ಸಂಬಂಧ ದೆಹಲಿಯಲ್ಲು ಸಭೆ ನಡೆಯಲಿದೆ. ಕರ್ನಾಟಕವೂ ನೀರು ಬಿಡುವ ವಿಚಾರದಲ್ಲಿ ಗಟ್ಟಿ ನಿರ್ಧಾರ ಹೇಳಲಿದೆ. ರಾಜ್ಯದ ಪರಿಸ್ಥಿತಿ ವಿವರಿಸಲಿದೆ. ಇದಾದ ನಂತರ ಸಭೆಯಲ್ಲಿ ಯಾವ ರೀತಿಯ ತೀರ್ಮಾನ ಮಾಡ್ತಾರೋ ನೋಡಬೇಕಿದೆ. ಆದ್ರೆ ತಮಿಳುನಾಡಿಗೆ ಪ್ರತಿ ದಿನ ನೀರು ಬಿಟ್ಟರೆ, ಕರ್ನಾಟಕ ಜನತೆ ನೀರಿಗಾಗಿ ಪರದಾಡ ಬೇಕಾಗುತ್ತದೆ. ಹೀಗಾಗಿ ಇಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ರೈತರು ಹೋರಾಟ ಮುಂದುವರೆಸಿದ್ದಾರೆ.