ಚಿತ್ರದುರ್ಗ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಏನೇನೋ ನಡೆಯುತ್ತಿದೆ. ಆ ವಿಚಾರವಾಗಿ ಕಾಂಗ್ರೆಸ್ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ ಮಾಡಿದ್ದರು. ಅವರ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಹಿರಿಯೂರಿನಲ್ಲಿ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಒಬ್ಬ ಹೋಂ ಮಿನಿಸ್ಟರ್ ಆಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮಸೀದಿಗಳಲ್ಲಿ ಆಜಾನ್ ಮಾಡೋದು ನಿನ್ನೆ ಮೊನ್ನೆ ಮಾಡ್ತಾ ಇದ್ದಾರಾ..? ಅನೇಕ ವರ್ಷಗಳಿಂದಲೂ ಮಾಡ್ತಾ ಇದ್ದಾರೆ. ಚುನಾವಣೆ ಹತ್ತಿರ ಬರುತ್ತಾ ಇದೆ ಅಂತೇಳಿ ಅದನ್ನ ದೊಡ್ಡ ಸುದ್ದಿಯಾಗಿ ಮಾಡ್ತಿದ್ದಾರೆ. ಬಿಜೆಪಿಗರಿಗೆ ಜನಪರವಾದಂತ ವಿಚಾರಗಳಿಲ್ಲ. ಜನಪರ ಕೆಲಸ ಮಾಡಿಲ್ಲ, ಅಭಿವೃದ್ಧಿ ಮಾಡಿಲ್ಲ. ಬೆಲೆ ಏರಿಕೆ ಗಗನ ಮುಟ್ಟಿದೆ. ಪೆಟ್ರೋಲ್ ಡಿಸೇಲ್, ವಿದ್ಯುತ್, ಹೊಟೇಲ್ ಎಲ್ಲಾ ದರ ಏರಿಕೆಯಾಗಿದೆ. ಇದನ್ನ ಮುಚ್ಚಿಕೊಳ್ಳೋದಕ್ಕೆ ಅನಗತ್ಯವಾದ ವಿಚಾರಗಳನ್ನ ಮುನ್ನೆಲೆಗೆ ತರುತ್ತಾ ಇದ್ದಾರೆ.
ಹಿಜಾಬ್ ತಗೊಂಡ್ ಬಂದ್ರು, ಜಾಯ್ರೆಯಲ್ಲಿ ವ್ಯಾಪಾರ ನಿಷೇಧ ಮಾಡಿದ್ರು, ಭಗವದ್ಗೀತೆ ವಿಚಾರ ತಂದ್ರು, ಹಲಾಲ್ ತಿನ್ಬೇಡಿ ಅಂದ್ರು ಈಗ ಧ್ವನಿವರ್ಧಕ ವಿಚಾರ ತಂದಿದ್ದಾರೆ. ಜನರಿಗೆ ಇದೆಲ್ಲಾ ಅರ್ಥವಾಗುತ್ತೆ. ಯಾರು ಈ ರೀತಿಯೆಲ್ಲಾ ಅನ್ನೋದು. ದೇವಸ್ಥಾನ, ಮಸೀದಿ, ಚರ್ಚ್ ನಲ್ಲೂ ಉಪಯೋಗಿಸ್ತಾರೆ. ಈಗ ಯಾಕೆ ಇದನ್ನ ತಂದಿದ್ದೀರಿ. ರೇಣುಕಾಚಾರ್ಯ ಬಗ್ಗೆ ಮಾತಾಡಲ್ಲ ಅವನೊಬ್ಬ ಮತಾಂಧ.
ಬಿಜೆಪಿಗೆ ಗೊತ್ತಿಲ್ಲದೆ ಏನು ನಡೆಯಲ್ಲ. ಇವರ ಕುಮ್ಮಕ್ಕು ಇದೆ. ಚುನಾವಣೆ ಮುಖ್ಯವೇ ವಿನಃ ಅವರುಗೆ ಸಮಾಜದ ಸಾಮರಸ್ಯ ಮುಖ್ಯವಲ್ಲ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತೆ. ಹೂಡಿಕೆದಾರರು ಬರುತ್ತಾರೆ. ಹೂಡಿಕೆ ಬಂದ್ರೆ ಉದ್ಯೋಗ ಸೃಷ್ಟಿಯಾಗಿತ್ತೆ. ಕಾನೂನು ಸುವ್ಯವಸ್ಥೆ ಇಲ್ಲದೆ ಹೋದರೆ ಉದ್ಯೋಗಗಳು ಸೃಷ್ಟಿಯಾಗಲ್ಲ ಎಂದಿದ್ದಾರೆ.