ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.27) : ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನತೆಯನ್ನು ನೀಡಿರುವ ಸಂವಿಧಾನ ಉಳಿಯಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕೆಂದು ಹಿರಿಯ ವಕೀಲರಾದ ಬಿ.ಕೆ.ರಹಮತ್‍ವುಲ್ಲಾ ತಿಳಿಸಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕೊಳಗೇರಿ ಮಕ್ಕಳಿಗೆ ನೋಟ್‍ಬುಕ್, ಪೆನ್‍ಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಳಗೇರಿ ನಿವಾಸಿಗಳಿಗೆ ಮೂಲಸೌಲಭ್ಯ ಒದಗಿಸಬೇಕೆನ್ನುವುದು ಗಣೇಶ್‍ರವರ ಚಿಂತನೆ. ಕೊಳಗೇರಿ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಅದಕ್ಕಾಗಿ ಪ್ರತಿ ವರ್ಷವೂ ನೋಟ್‍ಬುಕ್‍ಗಳನ್ನು ವಿತರಿಸುತ್ತಿರುವುದು ಅತ್ಯಂತ ಮಾನವೀಯವಾದುದು.
ಶಿಕ್ಷಣದ ಮೂಲಕ ಉನ್ನತ ಹುದ್ದೆ ಪಡೆದು ಬಡತನ ನಿರ್ಮೂಲನೆ ಮಾಡಬಹುದು ಎಂದು ಕೊಳಗೇರಿ ಮಕ್ಕಳಿಗೆ ಹೇಳಿದ ಬಿ.ಕೆ.ರಹಮತ್‍ವುಲ್ಲಾರವರು ಬಡತನ ನೆಪವಾಗಿಟ್ಟುಕೊಂಡು ಮಕ್ಕಳನ್ನು ಶಾಲೆಗೆ ಕಳಿಸುವುದನ್ನು ನಿಲ್ಲಿಸಬೇಡಿ ಎಂದು ಕೊಳಗೇರಿ ಮಹಿಳೆಯರಿಗೆ ತಾಕೀತು ಮಾಡಿದರು.
ಕೊಳಗೇರಿ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಹತ್ತಾರು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ನಗರಾಭಿವೃದ್ದಿ ಕೋಶದ ಸಹಾಯಕ ಇಂಜಿನಿಯರ್ ಸ್ವಾಮಿ ಮಾತನಾಡಿ ಕೊಳಗೇರಿ ನಿವಾಸಿಗಳ ಮಕ್ಕಳಿಗೆ ಕೆ.ಕೆ.ಎನ್.ಎಸ್.ಎಸ್.ಜಿಲ್ಲಾಧ್ಯಕ್ಷ ಗಣೇಶ್ ಪ್ರತಿ ವರ್ಷವೂ ನೋಟ್‍ಬುಕ್‍ಗಳನ್ನು ಕೊಡುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ನಾನೂ ಕೂಡ ಕೈಲಾದ ನೆರವು ನೀಡಿ ಅವರಿಗೆ ಕೈಜೋಡಿಸುತ್ತಿದ್ದೇನೆ. ಕೊಳಗೇರಿ ಮಕ್ಕಳು ವಿದ್ಯಾವಂತರಾದಾಗ ಮಾತ್ರ ಸಮಾಜದಲ್ಲಿ ನಾಗರೀಕರಾಗಿ ಬದುಕಲು ಸಾಧ್ಯ. ಇದರಿಂದ ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕರ್ನಾಟಕ ನಾಗರೀಕರ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಮತ ಮಾತನಾಡಿ ಇಂದಿನ ಪೀಳಿಗೆಗೆ ಅತ್ಯವಶ್ಯಕವಾಗಿ ಶಿಕ್ಷಣ ಬೇಕು. ಕೊಳಗೇರಿ ನಿವಾಸಿಗಳ ಮಕ್ಕಳು ನಿಜವಾಗಿಯೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಉಳ್ಳವರಿಗೆ ದಾನ ಮಾಡುವ ದೊಡ್ಡ ಮನಸ್ಸಿದ್ದಾಗ ಮಾತ್ರ ಬಡ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬಹುದು. ಶಿಕ್ಷಣದ ಜೊತೆ ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿಯನ್ನು ಕಲಿಸಬೇಕಿದೆ ಎಂದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ರಾಜ್ಯಾಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡುತ್ತ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್‍ರವರಲ್ಲಿ ಮಾನವೀಯತೆ ಇರುವುದರಿಂದ ಕೊರೋನಾದಂತ ಸಂಕಷ್ಟದ ಸಂದರ್ಭದಲ್ಲಿಯೂ ಕೊಳಗೇರಿ ಮಕ್ಕಳಿಗೆ ನೋಟ್‍ಬುಕ್ ಪೆನ್ನಗಳನ್ನು ವಿತರಿಸಿದ್ದಾರೆ. ಈಗ ಮತ್ತೆ ಅದೇ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಗಣೇಶ್‍ರವರಲ್ಲಿ ಬಡತನವಿದ್ದರೂ ಕೊಳಗೇರಿ ಮಕ್ಕಳಿಗೆ ಪ್ರತಿ ವರ್ಷವೂ ನೋಟ್‍ಬುಕ್ ಕೊಡುವುದನ್ನು ಇಂದಿಗೂ ನಿಲ್ಲಿಸಿಲ್ಲ. ಇಂತಹ ಮಾನವೀಯ ಮೌಲ್ಯಗಳುಳ್ಳವರನ್ನು ಗೌರವಿಸುವ ಕೆಲಸವಾಗಬೇಕೆಂದರು.
ಬಿ.ಎಸ್.ಪಿ.ಜಿಲ್ಲಾಧ್ಯಕ್ಷ ವೆಂಕಟೇಶ್ ಐಹೊಳೆ ಮಾತನಾಡಿ ಸಿರಿವಂತಿಕೆ-ಬಡತನ ಈ ತಾರತಮ್ಯ ನಿರ್ಮೂಲನೆಯಾಗಬೇಕಾದರೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಪ್ರಮುಖ ಅಸ್ತ್ರಗಳು. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಹಾಗಾಗಿ ಕೊಳಗೇರಿ ನಿವಾಸಿಗಳು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.
ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ಫೈಝಾನ್ ವೇದಿಕೆಯಲ್ಲಿದ್ದರು.