ಬೆಂಗಳೂರು: ಬಿಜೆಪಿಯಲ್ಲಿ ಮೊದಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯುದ್ಧ ಶುರುವಾಗಿದೆ. ಯತ್ನಾಳ್ ಬಣ ಪಣತೊಟ್ಟು ನಿಂತಿದ್ದು, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನ ಕೆಳಗಿಳಿಸಿಯೇ ತೀರುತ್ತೇವೆ ಎನ್ನುತ್ತಿದ್ದಾರೆ. ನಾನು ಕೂಡ ಆಕಾಂಕ್ಷಿ ನಾನೇ ನಿಲ್ತೀನಿ ಅಂತ ಯತ್ನಾಳ್ ಹೇಳ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕವೇ ಆಯ್ಕೆ ಎಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಇದರ ನಡುವೆ ವಿಪಕ್ಷ ನಾಯಕನ ಸ್ಥಾನಕ್ಕೂ ಕುತ್ತು ಬರುವಂತೆ ಕಾಣಿಸುತ್ತಿದೆ.
ಸದ್ಯ ಬಿಜೆಪಿಯಲ್ಲಿ ವಿಪಲ್ಷ ನಾಯಕನ ಸ್ಥಾನದಲ್ಲಿ ಆರ್.ಅಶೋಕ್ ಅವರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತನಾಡಿದ್ದು, ಅಶೋಕ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಪ್ರತಿದಿನ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಮಾತ್ರವಲ್ಲ ವಿರೋಧ ಪಕ್ಷದ ನಾಯಕರ ಸ್ಥಾನವೂ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದ್ದಾರೆ.
ನನಗೆ ಬಿಜೆಪಿಯಲ್ಲಿ ಅನೇಕ ಮಂದಿ ಸ್ನೇಹಿತರು ಇದ್ದಾರೆ. ಅವರಿಂದಲೇ ಈ ವಿಷಯ ನನಗೆ ಗೊತ್ತಾಯಿತು. ಹಾಗಾಗಿ ಖಾಲಿಯಾಗಲಿರುವ ಎರಡೂ ಕುರ್ಚಿಗಳ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಅಶೋಕ್ ಅವರು ವಿಪಕ್ಷ ನಾಯಕರಾಗಿರುವ ಕಾರಣ ಅವರು ಪ್ರತಿದಿನ ಏನಾದರೂ ಹೇಳಬೇಕು. ಇಲ್ಲದಿದ್ದರೆ ಹೈಕಮಾಂಡ್ ನಾಯಕರು ಅವರನ್ನು ಏನು ನಿದ್ದೆ ಮಾಡ್ತಾ ಇದ್ದೀರಾ ಅಂತ ಕೇಳ್ತಾರೆ. ಆದ ಕಾರಣ ಅಶೋಕ್ ಸುದ್ದಿಯಲ್ಲಿರಬೇಕೆಂದು ಕಾಂಗ್ರೆಸ್ ಬಗ್ಗೆ ಏನನ್ನಾದರೂ ಮಾತಾಡುತ್ತ ಇರುತ್ತಾರೆ. ಅಶೋಕ್ ಅವರು ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಯೋಚಿಸಲಿ. ಮೊದಲಿಗೆ ನಿಮ್ಮ ಪಕ್ಷದಲ್ಲಿ ಏನು ನಡೆದಿದೆ ಎಂಬುದನ್ನು ನೋಡಿಕೊಳ್ಳಲಿ ಎಂದಿದ್ದಾರೆ.