ನವದೆಹಲಿ: ಇತ್ತಿಚೆಗೆ ಡೀಪ್ ಫೇಕ್ ವಿಡಿಯೋಗಳು ಹೆಣ್ಣು ಮಕ್ಕಳಿಗೆ ಆತಂಕ ಸೃಷ್ಟಿಸಿವೆ. ಇಂಥ ಟೆಕ್ನಾಲಜಿಯಿಂದಾಗಿ ಹೆಣ್ಣುಮಕ್ಕಳ ವೈಯಕ್ತಿಕ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ನಟಿಯರೇ ಆದರೂ ಅವರದ್ದಲ್ಲದ ವಿಡಿಯೋ ಹರಿಬಿಟ್ಟರೆ ನೋವಾಗದೆ ಇರಲಾರದು. ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜಲ್ ಡೀಪ್ ಫೇಕ್ ನಿಂದ ಬೇಸರಗೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿಯನ್ನು ಡೀಪ್ ಫೇಕ್ ವಿಡಿಯೋ ಕಾಡುತ್ತಿದೆ.
ಎಐ ಟೆಕ್ನಾಲಜಿ ಬಳಸಿಕೊಂಡು ಪ್ರಧಾನಿ ಮೋದಿಯವರ ವಿಡಿಯೋ ಮಾಡಿದ್ದಾರೆ. ಮೋದಿಯವರು ಗರ್ಭಾ ನೃತ್ಯ ಮಾಡಿದಂತ ವಿಡಿಯೋ ಅದಾಗಿದೆ. ಈ ವಿಡಿಯೋ ಕಂಡು ಪ್ರಧಾನಿ ಮೋದಿ ಅವರು ಕೂಡ ಅಕ್ಷರಶಃ ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ಥೇಟ್ ಮೋದಿಯವರೇ ಗರ್ಭಾ ನೃತ್ಯ ಮಾಡಿದ್ದಾರೆ ಎನಿಸುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಎಐ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಜನರಲ್ಲಿ ಮಾಹಿತಿ ನೀಡಬೇಕು. ಈ ಡೀಪ್ ಫೇಕ್ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯೂ ಎದುರಿಸುತ್ತಿರುವ ಅತ್ಯಂತ ದೊಡ್ಡ ಆತಂಕವಾಗಿದೆ. ನಕಲಿ ಹಾಗೂ ನೈ ಕ್ಲಿಪ್ ಗಳ ನಡುವೆ ನೈಜತೆ ಕಂಡುಹಿಡಿಯುವುದು ಕಷ್ಟಕರವಾಗಿದೆ. ನನ್ನದೇ ವಿಡಿಯೋವನ್ನು ಅತ್ಯಂತ ನೈಜ ರೀತಿಯಲ್ಲಿ ಎಡಿಟ್ ಮಾಡಲಾಗಿದೆ. ಚಿಕ್ಕಂದಿನಿಂದಲೂ ನಾನು ಗರ್ಭಾ ನೃತ್ಯವಾಡಿಲ್ಲ. ಆದರೆ ಎಐ ಬಳಸಿ ಫೋಟೋ ಎಡಿಟ್ ಮಾಡಲಾಗಿದೆ. ಇದೆ ರೀತಿ ಬೇರೆಯವರ ಫೋಟೋ ಕೂಡ ಎಡಿಟ್ ಆಗಬಹುದು. ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡಬಹುದು ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.