ಸೋಲಿಗೆ ಧೃತಿಗೆಡುವುದಿಲ್ಲ : ಹೊಳಲ್ಕೆರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ : ಮಾಜಿ ಸಚಿವ ಎಚ್.ಆಂಜನೇಯ

 

 

ಹೊಳಲ್ಕೆರೆ, (ಮೇ.13) : ಸಚಿವನಾಗಿ ರಾಜ್ಯ, ಜಿಲ್ಲೆ ಹಾಗೂ ಹೊಳಲ್ಕೆರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರೂ ಕಳೆದ ಬಾರಿ ಸೋತಿದ್ದ ನನಗೆ ಈ ಬಾರಿ ಗೆಲುವು ನಿಶ್ಚಿತ ಎಂಬ ನನ್ನ ಭಾವನೆ ಹುಸಿಯಾಗಿದೆ. ಆದರೂ ಸೋಲಿಗೆ ಧೃತಿಗೆಡದೆ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನನ್ನ ಪರ ಹಗಲು-ರಾತ್ರಿ ಪ್ರಚಾರ ಕಾರ್ಯ ನಡೆಸಿದ್ದರು. ಜೊತೆಗೆ ಕ್ಷೇತ್ರದ ಜನರು ಜಾತ್ಯತೀತವಾಗಿ ಪ್ರೀತಿ-ಅಭಿಮಾನ ತೊರಿದ್ದು ಸ್ಮರಣೀಯ. ಇದು ಸೋಲಿನ ಕಹಿ ಮರೆಸಲಿದೆ ಎಂದಿದ್ದಾರೆ. ಈ ವಿಷಯದಲ್ಲಿ ಹೊಳಲ್ಕೆರೆ ಕ್ಷೇತ್ರದ ಜನರ ಪ್ರೀತಿಗೆ ನಾನು ಸದಾ ಚಿರಋಣಿ ಆಗಿರುತ್ತೇನೆ ಎಂದು ಹೇಳಿದ್ದಾರೆ.

ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಹೆರಳವಾಗಿ ಹಣ-ಹೆಂಡ ಹಂಚಿದ್ದರೂ ಕ್ಷೇತ್ರದ ಜನ ನನಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಕಡಿಮೆ ಮತಗಳ ಅಂತರ ಆಗಿದ್ದರೂ ಸೋಲು ಸೋಲೆ. ಈ ಸೋಲಿಗೆ ಕಾರಣ ಕಂಡುಕೊಳ್ಳುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಲು ಮುಂದಾಗುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿದು, ನಮ್ಮ ನಾಯಕರೇ ಮುಖ್ಯಮಂತ್ರಿ ಆಗುತ್ತಿರುವುದರಿಂದ ಅವರ ಮೇಲೆ ಒತ್ತಡ ತಂದು ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸುತ್ತೇನೆ. ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬೇಕಿಲ್ಲ. ಕ್ಷೇತ್ರದಲ್ಲಿಯೇ ಇದ್ದು ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಕಾರ್ಯಕರ್ತರಿಗೆ ಧೈರ್ಯದ ಮಾತು ಹೇಳಿದ್ದಾರೆ.

ಸರ್ಕಾರದ ಮಟ್ಟದಲ್ಲಿ ನಾಮನಿರ್ದೇಶನ ಸೇರಿ ವಿವಿಧ ಸ್ಥಾನಮಾನವನ್ನು ನಿಷ್ಠಾವಂತರಿಗೆ ಕೊಡಿಸಲು ಶ್ರಮಿಸುತ್ತೇನೆ. ಜೊತೆಗೆ ಬರಲಿರುವ ಜಿಲ್ಲಾ-ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಮರ್ಥರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ, ಅವರುಗಳ ಗೆಲುವಿಗೆ ಕ್ಷೇತ್ರದಲ್ಲಿ ಈಗಿನಿಂದಲೇ ಬುನಾದಿ ಹಾಕಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.

ನನ್ನ ಸೋಲಿನ ಕಹಿ ಮರೆಸುವ ರೀತಿ ಕ್ಷೇತ್ರದ ಜನರು ಪ್ರೀತಿ ತೋರಿದ್ದಾರೆ. ಜೊತೆಗೆ ರಾಜ್ಯದಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುತ್ತಿದೆ. ಈ ಸಂತಸ ಸಂದರ್ಭದಲ್ಲಿ ನಾವೆಲ್ಲರೂ ಭಾಗಿಯಾಗೋಣಾ. ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸೋಣಾ ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು, ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!