ಸುದ್ದಿಒನ್, ಚಳ್ಳಕೆರೆ, (ಅ.15) : ನಾವು ಹುಟ್ಟಿರೋದು ಇಲ್ಲೆ, ಓದಿರೋದು ಇಲ್ಲೆ, ಬೇರೆ ಊರಿಂದ ಬಂದಿಲ್ಲ. ನಾವು ಕೂದಲು, ಪೀಪಿ, ಪಿನ್ನ ಮಾರಿಕೊಂಡು ಜೀವನ ನಡೆಸುತ್ತೇವೆ ಸ್ವಾಮಿ, ಮಳೆಯಿಂದ ನಾವು ವಾಸವಾದ ಗೂಡಿಸಲು ಜಲಾವೃತ್ತವಾಗಿವೆ, ಇದರಿಂದ ವಾಸಕ್ಕೆ ಆಸರೆಯಿಲ್ಲದಂತೆಯಾಗಿದೆ, ನಮಗೆ ಬೇರೆಕಡೆ ಖಾಲಿ ನಿವೇಶನ ನೀಡಿ, ಸೂರಿನ ವ್ಯವಸ್ಥೆ ಕಲ್ಪಿಸಿ ಸ್ವಾಮಿ.
ನಗರಕ್ಕೆ ಸಮೀಪವಿರುವ ನಗರಂಗೆರೆ ಕೆರೆಯಂಗಳದಲ್ಲಿ ಮಳೆಯಿಂದ ಜಲಾವೃತ್ತವಾದ ಅಲೆಮಾರಿ ಗುಡಿಸಲು ವೀಕ್ಷಿಸಿ, ನಂತರ ಶಾಲೆಯಲ್ಲಿ ವಾಸವಾಗಿರುವ ಸಂತ್ರಸ್ಥರಿಗೆ ಸಂತ್ವಾನ ಹೇಳಲು ಹೋದ ಶಾಸಕ ಟಿ.ರಘುಮೂರ್ತಿ ಅವರ ಮುಂದೆ ಸಂತ್ರಸ್ಥರು ಅಳಲುತೋಡಿಕೊಂಡ ಪರಿ.
ಶಾಸಕರು ನಿಮ್ಮದು ಯಾವೂರು ಎನೂ ಕೆಲಸ ಮಾಡುತ್ತೀರಿ ಎಂದಾಗ..? 20 ವರ್ಷಗಳಿಂದ ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡು ಕೂದಲು, ಪೀಪಿ, ಪಿನ್ನ, ಬಾಚಿಣಿಕೆ ಮಾರಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತೇವೆ, ನಾವೂ ಓಟು ಇಲ್ಲಿ ಹಾಕುತ್ತೇವೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದೆ ಸ್ವಾಮಿ, ಆದರೆ ನಾಲ್ಮೈದು ದಿನ ಸುರಿದ ಮಳೆಗೆ ನಮ್ಮ ವಾಸದ ಗುಡಿಸಲುಗಳು ಜಲಾವೃತ್ತವಾಗಿರುವುದರಿಂದ ಗ್ರಾಪಂ ವತಿಯಿಂದ ಶಾಲೆಯಲ್ಲಿ ಗಂಜಿಕೇಂದ್ರ ತೆರದು ನಮಗೆ ಆಶ್ರಯ ನೀಡಿದ್ದಾರೆ, ನಮಗೆ ಮುಂದೆ ವಾಸ ಮಾಡಲು ಎಲ್ಲಿಯಾದರೂ ಸೂರಿನ ವ್ಯವಸ್ಥೆ ಮಾಡಿಸಿಕೊಡಿ ಸ್ವಾಮಿ ಎಂದು ಸಂತ್ರಸ್ಥರು ಶಾಸಕರ ಮುಂದೆ ಸಮಸ್ಯೆಯನ್ನು ಬಿಚ್ಚಿಟ್ಟರು.
ಸಂತ್ರಸ್ಥರ ಸಮಸ್ಯೆಗಳು ಆಲಿಸಿ ಮಾತನ ಶಾಸಕ ಟಿ.ರಘುಮೂರ್ತಿ ಕೆರೆಯಂಗಳದಲ್ಲಿ ನಿಮಗೆ ಮತ್ತೆ ನಿವೇಶನ ನೀಡಲಾಗುವುದಿಲ್ಲ, ಮತ್ತೆ ಇಲ್ಲೆ ನಿವೇಶನ ನೀಡಿದರೆ ಮಳೆ ಬಂದಾಗ ತೊಂದರೆಯಾಗುತ್ತದೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಮಗೆ ತಾತ್ಕಲಿಕವಾಗಿ ಜಯಣ್ಣ ನಗರದಲ್ಲಿ ನಿವೇಶನದ ವ್ಯವಸ್ಥೆ ಮಾಡಲಾಗುವುದು ಎಂದು ಸಂತ್ರಸ್ಥರಿಗೆ ಭರವಸೆ ನೀಡಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸಿ.ಬಿ, ಜಯಲಕ್ಷಿ್ಮೀ, ತಹಶೀಲ್ದಾರ್ ಎನ್. ರಘುಮೂರ್ತಿ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಪಂ ಅಧ್ಯಕ್ಷ ಎಸ್.ಟಿ. ಪಾತಲಿಂಗಪ್ಪ, ಸದಸ್ಯ ಕುಮಾರಸ್ವಾಮಿ, ಗ್ರಾಮ ಲೆಕ್ಕಧಿಕಾರಿ ರಘುನಾಥ ಸಿಂಗ್, ನಗರ ಲೆಕ್ಕಧಿಕಾರಿ ಪ್ರಕಾಶ, ಗ್ರಾಮಸ್ಥ ಓಬಣ್ಣ ಹಾಗೂ ಸಂತ್ರಸ್ಥರು ಇದ್ದರು.