ಡೆಹ್ರಾಡೂನ್: ಹೆತ್ತವರು ಎಂದು ನೋಡಲ್ಲ, ಪೋಷಕರು ಎಂಬ ಗೌರವವೂ ಇರಲ್ಲ. ಈ ರೀತಿಯ ಕೆಲವು ಮಕ್ಕಳು ಪೋಷಕರಿಗೆ ಒಂದಿಲ್ಲೊಂದು ಕಾರಣಕ್ಕೆ ಸದಾ ಕಿರಿಕಿರಿ ಉಂಟು ಮಾಡುತ್ತಿರುತ್ತವೆ. ಇದೀಗ ಇಂಥ ಕಾರಣಕ್ಕೆ ಹರಿದ್ವಾರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪೋಷಕರಿಗೆ ಕಿರಿಕಿರಿ ನೀಡುವ ಮಕ್ಕಳನ್ನು ಹೊರಗೆ ಕಳುಹಿಸಬಹುದು ಎಂದು ಆದೇಶ ನೀಡಿದೆ.
ಪೋಷಕರಿಗೆ ಕಿರಿಕಿರಿ ನೀಡುವ ಮಕ್ಕಳಿಗೆ ಒಂದೇ ತಿಂಗಳಲ್ಲಿ ಮನೆ ಖಾಲಿ ಮಾಡಿಸಬಹುದು. ಒಂದು ವೇಳೆ ಆದೇಶ ಪಾಲಿಸದೇ ಹೋದಲ್ಲಿ, ಪೊಲೀಸರು ಕ್ರಮ ತೆಗೆದುಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ. ಇಲ್ಲಿನ ಜ್ವಾಲಾಪುರದ ಆರು ದಂಪತಿ ದೂರೊಂದನ್ನು ದಾಖಲಿಸಿದ್ದರು. ನಮ್ಮ ಮಕ್ಕಳೇ ನಮ್ಮ ಮೇಲೆ ದೌರ್ಜನ್ಯವೆಸಗಿ, ಹಲ್ಲೆ ಮಾಡಿದ್ದಾರೆಂದು. ಜೊತೆಯಲ್ಲಿಯೇ ವಾಸಿಸುತ್ತಿದ್ದರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಊಟವನ್ನು ಸರಿಯಾಗಿ ನೀಡಲ್ಲ ಎಂದು ಆರೋಪಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಎಸ್ಡಿಎಂ ನ್ಯಾಯಾಲಯದ ನ್ಯಾಯಾಧೀಶ ಪುರಾನ್ ಸಿಂಗ್ ರಾಣಾ ಅವರು ಈ ಆದೇಶ ನೀಡಿದ್ದಾರೆ. ಜೊತೆಗೆ ಮಕ್ಕಳು ಪೋಷಕರ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಹಿಂದಿರುಗಿಸಬೇಕೆಂದು ಸೂಚಿಸಿದೆ. ಮಕ್ಕಳನ್ನು ಹೊರಹಾಕುವಂತೆ ಆದೇಶ ನೀಡಿದೆ.