ಚಿತ್ರದುರ್ಗ: ಸಮುದಾಯದ ಸಂಘಟನೆಯಿಂದ ಮೀಸಲಾತಿ ಪಡೆಯಲು ಸಾಧ್ಯವೆ ವಿನಃ ರಾಜಕಾರಣಿಗಳಿಂದ ನಮಗೆ ಮೀಸಲಾತಿ ಸಿಗುವುದಿಲ್ಲವೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನಾಯಕ ನೌಕರರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.
ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ನಾಯಕ ನೌಕರರ ಜೊತೆ ಚರ್ಚಿಸಿ ಮಾತನಾಡುತ್ತ ವಾಲ್ಮೀಕಿ ನಾಯಕ ಜನಾಂಗವನ್ನು ಎಸ್.ಟಿ.ಗೆ ಸೇರಿಸಿದ ಎಲ್.ಜಿ.ಹಾವನೂರ್‍ರವರನ್ನು ಇಂದು ನಾವುಗಳೆಲ್ಲಾ ಸ್ಮರಿಸಿಕೊಳ್ಳಬೇಕು.
ಕಾಲೆಳೆಯುವುದು, ವಿನಾ ಕಾರಣ ಆರೋಪ ಮಾಡುವುದರಿಂದ ಹಾಳಾಗಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಸಂಘಟನೆಯಿದೆ. ಏಳು ವರ್ಷಗಳ ಹಿಂದೆ ಪ್ರಾರಂಭವಾದ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನಾಯಕ ನೌಕರರ ಸಂಘ ಸಮಾಜಮುಖಿಯಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಉನ್ನತ ಹುದ್ದೆಯಲ್ಲಿರುವ ನಾಯಕ ಜನಾಂಗದವರು ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾಗಮೋಹನ್‍ದಾಸ್ ಸರ್ಕಾರಕ್ಕೆ ವರದಿ ನೀಡಿ ಒಂದುವರೆ ವರ್ಷವಾದರೂ ರಾಜ್ಯ ಸರ್ಕಾರ ಡ್ರಾಮ ಮಾಡುತ್ತಿದೆ. ಇದರ ಹಿಂದೆ ಆರ್.ಎಸ್.ಎಸ್.ಕೈವಾಡವಿದೆ.
ಜನಸಂಖ್ಯೆಗನುಗುಣವಾಗಿ ಎಸ್ಸಿ.ಗೆ ಶೇ.17 ಪರ್ಸೆಂಟ್, ಎಸ್ಟಿಗೆ ಶೇ.7.5 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡಲೇಬೇಕು. ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿರುವುದರ ವಿರುದ್ದ ನಾಯಕ ಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದರು.
ನಾಯಕ ಜನಾಂಗಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಪ್ರಸನ್ನಾನಂದಸ್ವಾಮಿಗಳು ಕಳೆದ 91 ದಿನಗಳಿಂದಲೂ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವುದು ಅವರಿಗೋಸ್ಕರವಲ್ಲ. ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಎನ್ನುವುದನ್ನು ನಾಯಕ ಸಮುದಾಯ ಮರೆಯಬಾರದು.
ಮೀಸಲಾತಿ ನೀಡುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಸ್ವಾಮೀಜಿಗಳು ಪಟ್ಟು ಹಿಡಿದಿದ್ದಾರೆ. ಅವರಿಗೆ ಬೆಂಬಲವಾಗಿ ನಾವುಗಳು ನಿಲ್ಲಬೇಕಷ್ಟೆ. ಎಸ್ಸಿ, ಎಸ್ಟಿ.ಗಳು ಒಂದಾಗಬಾರದೆಂದು ಸರ್ಕಾರ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದೆ. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಬೇರೆ ಜನಾಂಗದವರನ್ನು ಎಸ್ಟಿ.ಗೆ ಸೇರಿಸಲು ನಮ್ಮದೇನು ತಕರಾರಿಲ್ಲ. ಆದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ನಮ್ಮ ಮೀಸಲಾತಿಯನ್ನು ಬೇರೆಯವರು ಕಬಳಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬುದ್ದ, ಬಸವ, ಅಂಬೇಡ್ಕರ್‌ರವರ ಮಾರ್ಗದಲ್ಲಿ ಶಾಂತಿಯುತವಾಗಿ, ಕಾನೂನು ಬದ್ದವಾಗಿ ಹೋರಾಟ ಮಾಡಿ ಮೀಸಲಾತಿ ಪಡೆಯೋಣ. ಇದಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಒಂದಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಪಿ.ಕೆ.ಸದಾನಂದ ಮಾತನಾಡಿ ನಾಯಕ ಸಮುದಾಯಕ್ಕೆ ಶೇ.7.5 ಮೀಸಲಾತಿಗಾಗಿ ಪ್ರಸನ್ನಾನಂದಸ್ವಾಮಿಗಳು ಈ ಹಿಂದೆ ರಾಜನಹಳ್ಳಿಯಿಂದ ರಾಜಧಾನಿವರೆಗೂ ಪಾದಯಾತ್ರೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಅನೇಕ ಹೋರಾಟ, ಚಳುವಳಿಗಳು ನಡೆದಿದ್ದರೂ ಶೇ.75 ಮಿಸಲಾತಿ ಪಡೆಯಲು ಆಗುತ್ತಿಲ್ಲ. ಇದಕ್ಕೆ ನಮ್ಮ ಜನಾಂಗದಲ್ಲಿನ ಸಂಘಟನೆ ಕೊರತೆಯೂ ಇರಬಹುದು. ಅದಕ್ಕಾಗಿ ಎಲ್ಲರೂ ಒಂದಾಗಿ ಮೀಸಲಾತಿ ಪಡೆಯೋಣ ಎಂದು ಹೇಳಿದರು.
ಮಲ್ಲಿಕಾರ್ಜುನ್, ನಾಗರಾಜ್, ಪ್ರಾಚಾರ್ಯರಾದ ದೇವೇಂದ್ರಪ್ಪ, ಪ್ರಶಾಂತ್ ಕೂಲಿಕಾರ್, ನ್ಯಾಯವಾದಿ ಅಶೋಕ್‍ಬೆಳಗಟ್ಟ, ಮಲ್ಲಿಕಾರ್ಜುನ್ ಕುಂಚಿಗನಹಾಳ್, ರಾಜು ಸೇರಿದಂತೆ ನಾಯಕ ಸಮಾಜದ ಅನೇಕ ಮುಖಂಡರುಗಳು ಸಭೆಯಲ್ಲಿ ಹಾಜರಿದ್ದರು.