ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಏಪ್ರಿಲ್. 11 : ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಆಶಯಗಳಿಗೆ ಮೆರಗು ಬರಬೇಕಾದಲ್ಲಿ ಬಸವಜಯಂತಿಯಂದು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಅವರ ಸಂದೇಶಗಳ ಚಿಂತನ ಮಂಥನ ನಾಡಿನಲ್ಲೆಲ್ಲ ಏಪ್ರಿಲ್ 30 ರಂದು ನಡೆಯುವುದು ಸ್ವಾಗತಾರ್ಹ. ಆದರೆ ಅಂದು ಬೇರೆ ಯಾರ ಜಯಂತಿ ಆಚರಣೆ ಖಂಡಿತ ಬೇಡ ಎಂದು ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಬಸವ ಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಮಾಡುವಂತೆ ‘ಅಖಿಲ ಭಾರತ ವೀರಶೈವ ಲಿಂಗಾಯತ ಸಂಸ್ಥೆ’ಯ ರಾಜ್ಯಾಧ್ಯಕ್ಷ ಶ್ರಿ ಶಂಕರ ಬಿದರಿ ಅವರು ಆದೇಶ ಹೊರಡಿಸಿದ್ದನ್ನು ಗಮನಿಸಿದೆವು. ಬಸವ ಜಯಂತಿಯಂದು ರೇಣುಕ ಜಯಂತಿ ಮಾಡುವ ಉದ್ದೇಶವೇನು ? ಬಸವಣ್ಣ ಲಿಂಗಾಯತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ ? ಬಸವಣ್ಣ ಐತಿಹಾಸಿಕ ವ್ಯಕ್ತಿ. ರೇಣುಕರು ? ಬಸವಜಯಂತಿಯಂದು ಬಸವಣ್ಣನವರ ವಿಚಾರಗಳು ಜನಮನಕ್ಕೆ ಮುಟ್ಟಬೇಕೇ ಹೊರತು ರೇಣುಕ ಮತ್ತಿತರ ವಿಚಾರಗಳಲ್ಲ. ಬಸವಣ್ಣನವರ ತತ್ವಸಿದ್ಧಾಂತಗಳು ಸಮಾಜಮುಖಿ, ಜೀವಪರ. ಅಲ್ಲಿ ಸಮಾನತೆ ಇದೆ. ಸಕಲ ಜೀವಾತ್ಮರ ಒಳಿತಿದೆ. ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವೂ ಇದೆ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


