ಜನವರಿ 22 ರಂದು ಅಯೋಧ್ಯೆಗೆ ಯಾರೂ ಬರಬೇಡಿ :  ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ

ಸುದ್ದಿಒನ್ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತಿದ್ದು, ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗುತ್ತಿದೆ. ದೇಗುಲದ ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. 

ಶನಿವಾರ ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನವೀಕೃತ ರೈಲ್ವೆ ಜಂಕ್ಷನ್ ಮತ್ತು ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಇಡೀ ವಿಶ್ವವೇ ಆ ಕಾರ್ಯಕ್ರಮಕ್ಕಾಗಿ ಕಾಯುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಮಹತ್ವದ ಸೂಚನೆ ನೀಡಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂದು ಅಯೋಧ್ಯೆಯಲ್ಲಿ ಬಾರೀ ಜನಸ್ತೋಮ ಸೇರುವುದರಿಂದ ಭಕ್ತರು ಅಯೋಧ್ಯೆಗೆ ಬಂದು ತೊಂದರೆಗೊಳಗಾಗಬಾರದೆಂದು ಪ್ರಧಾನಿ ಮೋದಿ ಮನವಿ ಮಾಡಿದರು. ಜನವರಿ 23 ರ ನಂತರ ಯಾವಾಗ ಬೇಕಾದರೂ ಶ್ರೀರಾಮನ ದರ್ಶನ ಮಾಡಬಹುದು ಎಂದು ಮೋದಿ ಸಲಹೆ ನೀಡಿದರು.

ಬಹಳಾ ವರ್ಷಗಳಿಂದ ಎದುರು ನೋಡುತ್ತಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಅಯೋಧ್ಯೆಯಲ್ಲಿ ನಡೆಯಲಿರುವ ಜನವರಿ 22 ನೇ ತಾರೀಖು ಇತಿಹಾಸದಲ್ಲಿ ವಿಶೇಷ ದಿನವಾಗಲಿದೆ. ಅಂದು ರಾತ್ರಿ ದೇಶದ ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗುವಂತೆ ಸಲಹೆ ಕೋರಿದರು. ಒಂದು ಕಾಲದಲ್ಲಿ ರಾಮ್ ಲಲ್ಲಾ ಟೆಂಟ್ ನಲ್ಲಿ ಇರಬೇಕಿತ್ತು. ಆದರೆ ಈಗ ಅಯೋಧ್ಯೆ ರಾಮನಿಗಾಗಿ ಅತ್ಯಂತ ಸುಂದರವಾದ ಮಂದಿರವನ್ನು ನಿರ್ಮಿಸಲಾಗಿದೆ ಎಂದರು.

ಇಂದು ಅಯೋಧ್ಯೆ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವಿಮಾನ ನಿಲ್ದಾಣಕ್ಕೆ ಮಹರ್ಷಿ  ವಾಲ್ಮೀಕಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುತ್ತಿರುವುದರಿಂದ ಜನ್ಮ ಧನ್ಯವಾಯಿತೆಂದು ಭಾವಿಸುತ್ತೇನೆಂದರು. ದಿನಕ್ಕೆ 10 ಲಕ್ಷ ಜನರನ್ನು ಬಂದು ಹೋಗುವಂತೆ  ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಅಯೋಧ್ಯೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸೌಲಭ್ಯಗಳೊಂದಿಗೆ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಇಂದು ಬೆಳಗ್ಗೆ ಅಯೋಧ್ಯೆ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ 15 ಕಿಲೋಮೀಟರ್‌ಗಳವರೆಗೆ ಮೆಗಾ ರೋಡ್ ಶೋ ಆಯೋಜಿಸಲಾಗಿತ್ತು. ಈ ರೋಡ್ ಶೋನ ಪ್ರತಿ ಹೆಜ್ಜೆಯಲ್ಲೂ ಜನರು ಮೋದಿಯವರಿಗೆ ಜೈಕಾರ ಹಾಕಿದರು. ಅದರ ನಂತರ ಅಯೋಧ್ಯಾ ಧಾಮ್ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. 2 ಅಮೃತ್ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣ ತಲುಪಿದ ಪ್ರಧಾನಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದಲ್ಲದೇ ರೂ.15,700 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *