ಚಿತ್ರದುರ್ಗ: ಸಮಗ್ರ ಅಧ್ಯಯನ ವರದಿ ಇಲ್ಲದೆ ವಿಷಯದ ಬಗ್ಗೆ ಪೂರ್ವಾಪರ ಚರ್ಚಿಸದೆ ಏಕಾಏಕಿ ಮತಾಂತರ ನಿಷೇಧ ಕಾಯಿದೆಯನ್ನು ವಿಧಾನಸಭೆಯಲ್ಲಿ ಮಂಡಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಆಪಾದಿಸಿದರು.

ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮತಾಂತರ ಕುರಿತು ಇಷ್ಟು ವರ್ಷ ಯಾವುದೇ ಸಮಸ್ಯೆ ಅನಾಹುತವಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಎಲ್ಲಿಯಾದರೂ ಮತಾಂತರವಾಗಿದ್ದರೆ ಸರ್ಕಾರ ಅಂಕಿ ಅಂಶಗಳನ್ನು ನೀಡಲಿ. ಹಿಂದುತ್ವದ ಹೆಸರಿನಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬರಲು ಹೊರಟಿರುವ ಬಿಜೆಪಿ. ಮತಾಂತರ ನಿಷೇಧ ಕಾಯಿದೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಯಿದೆಗೆ ವಿರೋಧ ವ್ಯಕ್ತಪಡಿಸಿದರು.

ಬಲವಂತವಾಗಿ ಎಲ್ಲಿಯಾದರೂ ಮತಾಂತರವಾಗಿದ್ದರೆ ಜನರ ಬಳಿ ಚರ್ಚಿಸಿ ಸಾಧಕ-ಬಾಧಕಗಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ. ಇದ್ಯಾವುದನ್ನು ಮಾಡದ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯಿದೆಗೆ ವಿಧೇಯಕ ಮಂಡಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸೂಚಿಸಿರುವುದು ಯಾವ ನ್ಯಾಯ. ಪಾದ್ರಿ ಕರಪತ್ರ ಹಂಚಿದರೆ, ಕುರಾನ್ ಪಠಿಸಿದರೆ ಮತಾಂತರ ಹೇಗಾಗುತ್ತದೆ. ಮತಾಂತರ ಮಾಡಬೇಡಿ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ. ಅವಕಾಶ ವಂಚಿತರಿಗೆ ಶಿಕ್ಷಣ, ನಿರ್ಗತಿಕರಿಗೆ ಅನ್ನ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದರೆ ಮತಾಂತರ ಹೇಗೆ ಆಗುತ್ತದೆ ಎಂದು ಸರ್ಕಾರವನ್ನು ಜೆ.ಯಾದವರೆಡ್ಡಿ ಖಾರವಾಗಿ ಪ್ರಶ್ನಿಸಿದರು.
ಇದು ಮಾನವೀಯ ಸಂಬಂಧಗಳನ್ನು ಹಾಳು ಮಾಡುವ ಅಜೆಂಡಾ. ಕ್ರಿಶ್ಚಿಯನ್ನರು, ಮುಸಲ್ಮಾನರ ಕೊಡುಗೆಯೂ ಈ ದೇಶಕ್ಕೆ ಅಪಾರವಾಗಿದೆ. ಮಾನವೀಯ ಸಂಬಂಧವನ್ನು ಹಾಳು ಮಾಡಲು ಹೊರಟಿರುವ ಬಿಜೆಪಿ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹೊಡೆಯುವ ಬದಲು ಸಾಕ್ಷಿ ಸಮೇತ ನೀಡಲಿ. ಹಿಂದು ಧರ್ಮ ಎನ್ನುವುದಕ್ಕೆ ಸಾಂಸ್ಕøತಿಕ ಸ್ವರೂಪವಿಲ್ಲ. ಎಲ್ಲಾ ಜಾತಿ ಧರ್ಮಗಳಿಗೂ ತನ್ನದೆ ಆದ ಸಾಂಸ್ಕøತಿಕತೆಯಿದೆ. ಸರ್ಕಾರ ಇದೇ ಪ್ರವೃತ್ತಿ ಮುಂದುವರೆಸಿ ಸಮಾಜದಲ್ಲಿ ಕೋಮುದ್ವೇಷ ಬಿತ್ತಲು ಹೊರಟಿರುವುದನ್ನು ಕಾನೂನು ಮೂಲಕ ಪ್ರಶ್ನಿಸುತ್ತೇವೆ. ಮತಾಂತರ ಎನ್ನುವ ಪದವೇ ಗೊಂದಲವಿದೆ. ತಳಸಮುದಾಯದವರು ಮುಖ್ಯವಾಹಿನಿಗೆ ಬರಬಾರದೆ. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಗೌರವಿಸುವ ಕರ್ತವ್ಯ ಆಳುವ ಸರ್ಕಾರದ್ದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಸ್ವರಾಜ್ ಇಂಡಿಯಾ ಪಕ್ಷದ ಕಾರ್ಯಾಧ್ಯಕ್ಷ ಶಿವಕುಮಾರ್, ಸದಸ್ಯ ಧನಂಜಯ ಹಂಪಯ್ಯನಮಾಳಿಗೆ ಪತ್ರಿಕಾಗೋಷ್ಟಿಯಲ್ಲಿದ್ದರು.


