ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಶಾಲೆಗಳಲ್ಲಿ ಶಿಕ್ಷಕರು ಯಾರಾದರೂ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದರೆ ಫೋಕ್ಸೋ ಕಾಯಿದೆಯಡಿ ಜಡಿಯುತ್ತೇನೆ. ಯಾವ ಮುಲಾಜಿಗೂ ಒಳಗಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಎಚ್ಚರಿಕೆ ನೀಡಿದರು.
ಉರ್ದು ದಿವಸ್ ಅಂಗವಾಗಿ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಮೌಲಾನ ಅಬುಕಲಾಂ ಆಜಾದ್, ಕವಿ ಅಲ್ಲಮ ಇಕ್ಬಾಲ್ ಜನ್ಮದಿನಾಚರಣೆ ಹಾಗೂ ಜಿಲ್ಲೆಯ ಉರ್ದು ಶಾಲಾ ಶಿಕ್ಷಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಎನ್.ಇ.ಪಿ.ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಲ್ಲಿ ಮೌಲ್ಯ, ತತ್ವಗಳೆ ಇಲ್ಲದಂತಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಮಕ್ಕಳನ್ನು ಚೈಲ್ಡ್ ಕೇರ್ ಸೆಂಟರ್‍ಗೆ ಸೇರಿಸಿ ತಂದೆ-ತಾಯಿ ದುಡಿಯಲು ಹೊರಗೆ ಹೋಗುತ್ತಾರೆ. ಮಕ್ಕಳು ತಾಯಿಯ ಹತ್ತಿರ ಬೆಳೆದಾಗ ಮಾತ್ರ ಸಂಸ್ಕಾರವಂತರಾಗಬಹುದು. ಶಿಕ್ಷಣ ಇಲಾಖೆ ಮಕ್ಕಳಿಗೆ ಎಲ್ಲವನ್ನು ಕಲಿಸಬೇಕಿದೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಶಿಕ್ಷಕರು ಶಾಲೆಗಳಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಕಂಡು ಬಂದಲ್ಲಿ ಸಹಿಸುವುದಿಲ್ಲ. ಮುಲಾಜಿಲ್ಲದೆ ಫೋಕ್ಸೋ ಕಾಯಿದೆಯಡಿ ದೂರು ದಾಖಲಿಸಬೇಕಾಗುತ್ತದೆ. ನಿಮಗೆ ನೀಡಿರುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಿ ಎಂದು ಜಾಗೃತರನ್ನಾಗಿಸಿದರು.
ಶಿಕ್ಷಣ ಇಲಾಖೆಯಲ್ಲಿ ಎಲ್ಲವೂ ಸರಿಯಿರಬೇಕು. ಮನೆಯಲ್ಲಿರುವ ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳಿ. ನಿರ್ಲಕ್ಷೆ ಮಾಡಬೇಡಿ ಎಂದು ಉರ್ದು ಶಿಕ್ಷಕ/ಶಿಕ್ಷಕಿಯರಿಗೆ ಕಿವಿಮಾತು ಹೇಳಿದ ಕೆ.ರವಿಶಂಕರ್ ರೆಡ್ಡಿ ಮಾನವ ಜನ್ಮ ದೊಡ್ಡದು. ತಾಯಿ ಋಣ, ಗುರುವಿನ ಋಣ, ಸಮಾಜದ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ.
ನಿಮ್ಮ ಸಮಸ್ಯೆಗಳೇನಿದ್ದರೂ ನನ್ನ ಗಮನಕ್ಕೆ ತನ್ನಿ ಸರ್ಕಾರದಿಂದ ನಿಮಗೆ ಸಿಗಬೇಕಾದ ಬೆನಿಫಿಟ್ಸ್‍ಗಳನ್ನು ಕೊಡಿಸಲು ಬದ್ದನಾಗಿದ್ದೇನೆ. ಕಳೆದ ಬಾರಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೆ ಸ್ಥಾನದಲ್ಲಿದ್ದ ನಮ್ಮ ಜಿಲ್ಲೆಯನ್ನು ಈ ಬಾರಿ ಒಂದನೆ ಸ್ಥಾನಕ್ಕೆ ತರಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಿ ಎಂದು ಉರ್ದು ಶಿಕ್ಷಕರಿಗೆ ತಾಕೀತು ಮಾಡಿದರು.
ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ. ಜೊತೆಗೆ ಮಕ್ಕಳ ಬಗ್ಗೆ ನಿಮ್ಮಲ್ಲಿ ಕರುಣೆಯೂ ಇರಲಿ. ಯಾವುದೇ ಕಾರಣಕ್ಕೂ ತೊಂದರೆಗಳನ್ನು ಮಾಡಿಕೊಳ್ಳಬೇಡಿ ಎಂದು ಉರ್ದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.
ಡಯಟ್ ಪ್ರಾಚಾರ್ಯರಾದ ಎಸ್.ಕೆ.ಬಿ.ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಕರ್ನಾಟಕ ಉರ್ದು ಅಭಿವೃದ್ದಿ ನಿಗಮದ ಅಧ್ಯಕ್ಷ ಉಬೇದುಲ್ಲಾ ಷರೀಫ್, ಕೈಗಾರಿಕೋದ್ಯಮಿ ಎಂ.ಕೆ.ತಾಜ್‍ಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಜಿಲ್ಲೆಯ ಅತ್ಯುತ್ತಮ ಉರ್ದು ಶಿಕ್ಷಕ/ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.