ಮೈಸೂರು: ಸಿಎಂ ಕುರ್ಚಿ ಬದಲಾವಣೆಯ ವಿಚಾರ ಇನ್ನೂ ಕೂಡ ತಣ್ಣಗಾಗಿಲ್ಲ. ಸದ್ಯ ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿದೆ. ಹೀಗಾಗಿ ಕಾಂಗ್ರೆಸ್ ನ ಘಟಾನುಘಟಿಗಳೇ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸಿಎಂ ವಿಚಾರ ಸದ್ಯಕ್ಕೆ ನಿಂತಿದೆ. ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉಳಿದ ಎರಡೂವರೆ ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪರಮೇಶ್ವರ್ ಅವರು, ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಪಕ್ಷದ ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028ರವರೆಗೆ ಇದೆ. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವ ಅವಶ್ಯಕತೆ ಇಲ್ಲ. ಹೈಕಮಾಂಡ್ ಯಾವ ಗೊಂದಲಗಳನ್ನು ಸೃಷ್ಟಿ ಮಾಡಿಲ್ಲ. ಯಾರೂ ಏನೇ ಹೇಳಿದರು ಅದು ಮುಖ್ಯ ಅಲ್ಲ.
ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ? ಬದಲಾವಣೆ ಬಗ್ಗೆ ಮಾತನಾಡಿದ್ದಾರಾ? ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆ ಇಲ್ಲ. ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಅಲ್ಲಿಯವರೆಗೆ ಯಾರು ಏನೇ ಮಾತನಾಡಿದ್ರು ಅದು ವೈಯಕ್ತಿಕ ಅಭಿಪ್ರಾಯ ಎಂದರು. ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ. ಅದರಲ್ಲಿ ನಾನು ಅರ್ಹ ಇನ್ನೊಬ್ಬರು ಎಂಬ ಪ್ರಶ್ನೆಯೇ ಬರುವುದಿಲ್ಲ. ಉಪಚುನಾವಣೆಯ ಫಲಿತಾಂಶಕ್ಕೂ ಬೇರೆ ವಿಚಾರಕ್ಕೆ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು.















