ಕಷ್ಟದ ದಿನದಲ್ಲಿ ಅದ್ಧೂರಿ ಆಚರಣೆ ಬೇಡ : ಹುಟ್ಟುಹಬ್ಬ ಆಚರಿಸದಿರಲು ಕುಮಾರಸ್ವಾಮಿ ನಿರ್ಧಾರ

1 Min Read

ಬೆಂಗಳೂರು: ಇದೇ ಡಿಸೆಂಬರ್ 16 ರಂದು‌ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದೆ. ಆದ್ರೆ ಈ ಬಾರಿ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಇದೇ ಡಿ.16ರಂದು ನನ್ನ ಜನ್ಮದಿನ. ಈ ದಿನಕ್ಕಾಗಿ ನಿಮ್ಮಲ್ಲಿರುವ ಪ್ರೀತಿಯ ಕಾತರವನ್ನು ನಾನು ಬಲ್ಲೆ. ಕಳೆದೆರಡು ವರ್ಷಗಳಿಂದ ಕೋವಿಡ್‌-19 ಕಾರಣಕ್ಕೆ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಸಾವು-ನೋವು ಕಂಡಿದ್ದೇವೆ. ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಈ ಕಷ್ಟದ ಸಮಯದಲ್ಲಿ ಅದ್ಧೂರಿ ಜನ್ಮದಿನ ಆಚರಣೆ ನನ್ನ ಮನಸ್ಸಿಗೆ ಒಪ್ಪುವ ವಿಚಾರವಲ್ಲ. ಹಾರ ತುರಾಯಿ ಹಾಕಿ, ಕೇಕ್‌ ಕತ್ತರಿಸಿ ವಿಜೃಂಭಣೆ ಮಾಡುವುದು ಬೇಡ. ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ.

ಹೀಗೆ ನನ್ನ ಜನ್ಮದಿನಕ್ಕೆ ಸಾರ್ಥಕತೆ ತನ್ನಿ. ಅದ್ಧೂರಿ ಹುಟ್ಟುಹಬ್ಬ ನನಗೆ ಸುತರಾಂ ಇಷ್ಟವಿಲ್ಲ. ಆ ಅದ್ಧೂರಿತನದಲ್ಲಿ ಕಂಗೆಟ್ಟಿರುವ ಜನರನ್ನು ಅಣಕಿಸುವುದು ಬೇಡ. ನೀವೆಲ್ಲರೂ ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ.

ಹೊಸ ಚೈತನ್ಯ ಮತ್ತು ದೃಢ ಸಂಕಲ್ಪದೊಂದಿಗೆ, ಪಕ್ಷವನ್ನು ಕಟ್ಟೋಣ. ಸವಾಲುಗಳನ್ನು ಮೆಟ್ಟಿ ನಿಲ್ಲೋಣ. ನನ್ನ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ನನ್ನದೊಂದು ಕಳಕಳಿಯ ಮನವಿ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *