ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ನನ್ನ ಸಾವಿಗೆ ನೇರ ಕಾರಣ ಸಚಿವ ಈಶ್ವರಪ್ಪ ಅಂತ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಂಗ್ರೆಸ್ ನಾಯಕರು ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಆತ್ಮಹತ್ಯೆ ಕೇಸ್ ತನಿಖೆ ನಡೆಯುತ್ತಿದೆ. ಸಂಪೂರ್ಣವಾಗಿ ತನಿಖೆಯಾಗಲಿದೆ. ಮೊದಲು ಪ್ರಾಥಮಿಕ ತನಿಖೆಯ ವರದಿ ಬರಲಿ, ಆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪ್ರಾಥಮಿಕ ವರದಿ ಬರುವ ಮುನ್ನ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಕ್ರಮ ಇಲ್ಲ ಎಂಬುದನ್ನು ಹೇಳಿದ್ದಾರೆ.
ಸಂತೋಷ್ ವಿಚಾರದಲ್ಲಿ ಪ್ರತಿಭಟನೆ ಮಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಯಾಕಂದ್ರೆ ಕಾಂಗ್ರೆಸ್ ಆಡಳಿತದ ಕಾಲದಲ್ಲೂ ಹಲವು ಕೊಲೆಗಳು ಆಗಿದ್ದವು. ಆದರೆ ಆಗ ಆರೋಪಿಗಳ ಮೇಲಿನ ಪ್ರಕರಣವನ್ನು ಹಿಂಪಡೆದಿತ್ತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಗುತ್ತಿಗೆದಾರ ಸಂಘಗಳು ಇದೆ. ಇಂಥ ಕಡೆ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ರೆ ಇಂದಿಗೂ ಅದನ್ನು ತನಿಖೆ ಮಾಡಿಸುತ್ತೀವಿ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.