ಎನ್‌ಐಎ ಮತ್ತು ಇಡಿ ದಾಳಿ : 100 ಕ್ಕೂ ಹೆಚ್ಚು PFI ಕಾರ್ಯಕರ್ತರ ಬಂಧನ…!

ನವದೆಹಲಿ, (ಸೆ.22) :  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಸೇರಿದಂತೆ ಗುಂಪುಗಳ ಶೋಧ ನಡೆಸಿದೆ.

ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಸಿದ ಶೋಧಗಳಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ.

ಬುಧವಾರ ಮಧ್ಯರಾತ್ರಿಯಿಂದ ದಾಳಿ ನಡೆಸಲಾಗಿದ್ದು, ಗುರುವಾರ ಬೆಳಗ್ಗೆ 100 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಎನ್‌ಐಎ ಜೊತೆಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸ್ ತಂಡಗಳು ಈ ದಾಳಿಗಳಲ್ಲಿ ಭಾಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಬಿಹಾರ, ಕೇರಳ, ಆಂಧ್ರಪ್ರದೇಶ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ದಾಳಿಗಳು ನಡೆದಿವೆ. ಈ ದಾಳಿಗಳ ಮೇಲೆ ಕೇಂದ್ರ ಗೃಹ ಇಲಾಖೆ ನಿಗಾ ವಹಿಸುತ್ತಿದೆ. ಭಯೋತ್ಪಾದಕರ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ನಿರ್ವಹಣೆ ಮತ್ತು ಜನರಲ್ಲಿ ದ್ವೇಷವನ್ನು ಹುಟ್ಟು ಹಾಕುವಂತಹ ವಿಷಯಗಳ ಕುರಿತು ಎನ್‌ಐಎ ಇತಿಹಾಸದಲ್ಲಿಯೇ ಇದು ಅತಿದೊಡ್ಡ ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ. ಇಡಿ ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ, ಯುಎಇ, ಓಮನ್, ಕತಾರ್, ಕುವೈತ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಿಂದ ಹಣವನ್ನು ಸಂಗ್ರಹಿಸಲು ಪಿಎಫ್‌ಐ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಗಳನ್ನು ರಚಿಸಿದೆ. ಹವಾಲಾ ಸೇರಿದಂತೆ ಇತರ ಅಕ್ರಮ ಮಾರ್ಗಗಳ ಮೂಲಕ ಹಣವನ್ನು ಸಾಗಿಸಲು ವೈಯಕ್ತಿಕ ಗುರಿಗಳನ್ನು ಸಹ ನೀಡಲಾಗುತ್ತಿದೆ ಎಂದು ಇಡಿ ಹೇಳಿದೆ.

ಈ ದಾಳಿಗಳ ಭಾಗವಾಗಿ, ದೇಣಿಗೆ ನೀಡಿದ 600 ಕ್ಕೂ ಹೆಚ್ಚು ಜನರ ಬ್ಯಾಂಕ್ ಖಾತೆಗಳನ್ನು ಇಡಿ ಪರಿಶೀಲಿಸಿದೆ. 2,600ಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ನಕಲಿ ಖಾತೆಗಳು ಮತ್ತು ಪರಿಶೀಲನೆಯ ಸಮಯದಲ್ಲಿ ಖಾತೆದಾರರು ಇರಲಿಲ್ಲ ಎಂದು ಇಡಿ ತೀರ್ಮಾನಿಸಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಅನ್ಶಾದ್ ಬಸದಿನ್ ನನ್ನು ಬಂಧಿಸಿತ್ತು. ಆತನಿಂದ ಐಇಡಿ, ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಫ್‌ಐ ಆತನಿಗೆ ರೂ.3.5 ಲಕ್ಷಗಳನ್ನು ವರ್ಗಾವಣೆ ಮಾಡಿರುವುದನ್ನು ಇಡಿ ಪತ್ತೆ ಮಾಡಿದೆ. ಪಿಎಫ್‌ಐ ಭಯೋತ್ಪಾದಕ ಚಟುವಟಿಕೆಗಳ ಭಾಗವಾಗಿದೆ ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗದಲ್ಲಿ ಶಂಕಿತ ಉಗ್ರಗಾಮಿಗಳನ್ನು ಪೊಲೀಸರು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *