ಕ್ಯಾನ್ಸೀಲಿಯಂ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನಿಮಾ. ಈ ಚಿತ್ರದ ವಿಶೇಷತೆ ಎಂದರೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ ಎನ್ನುವ ಈ ಚಿತ್ರತಂಡ ಚಿತ್ರರಂಗದಲ್ಲಿ ಮೊದಲ ಬಾರಿ ತಮ್ಮನ್ನು ಸವಾಲಿಗೊಡ್ಡಿಕೊಂಡಿದೆ. ಯಾಕಂದ್ರೆ ಇಡೀ ಚಿತ್ರತಂಡಕ್ಕೆ ಸಿನಿಮಾ ಇದೇ ಮೊದಲ ಅನುಭವ. ಅದ್ಹಂಗೆ ಕ್ಯಾನ್ಸೀಲಿಯಂ ಒಂದು ಲ್ಯಾಟಿನ್ ಪದ. ಇದರರ್ಥ ಉದ್ದೇಶ, ಪ್ಲ್ಯಾನ್, ಸಲಹೆ ಎಂದು. ಸಿನಿಮಾ ಕಥೆಗೆ ಸೂಕ್ತವಾದ್ದರಿಂದ ಈ ಹೆಸರನ್ನೇ ಇಡಲಾಗಿದೆ ಎನ್ನುತ್ತದೆ ಸಿನಿಮಾ ತಂಡ.
ಹೊಸ ಬಗೆಯ ನಿರೂಪಣೆ, ತಾಂತ್ರಿಕ ಶ್ರೀಮಂತಿಕೆ, ಹೊಸತನ ಒಳಗೊಂಡ ಕ್ಯಾನ್ಸೀಲಿಯಂ ಸಿನಿಮಾ ಸೆಟ್ಟೇರಿದ್ದು ಮೂರು ವರ್ಷಗಳ ಹಿಂದೆ. ಸಮರ್ಥ್ ಈ ಚಿತ್ರದ ರೂವಾರಿ. ಚಿತ್ರದ ಕಥೆ, ನಿರ್ದೇಶನದ ಜವಾಬ್ದಾರಿ ಜೊತೆಗೆ ನಾಯಕ ನಟನಾಗಿ ಮಿಂಚಿದ್ದಾರೆ. ಸಮರ್ಥ್ ಸಹೋದರ ಪ್ರೀತಂ ಕೂಡ ಈ ಚಿತ್ರದ ನಾಯಕನಟ. ಚಿತ್ರದಲ್ಲಿ ನಾಯಕಿಯರಾಗಿ ಖುಷಿ ಆಚಾರ್, ಅರ್ಚನಾ ನಟಿಸಿದ್ದಾರೆ.
ಇಬ್ಬರು ನಾಯಕರ ಬದುಕಲ್ಲಿ ಅರಿವಿಲ್ಲದೆ ಘಟಿಸುವ ಘಟನೆಗಳು, ಅವರಿಬ್ಬರ ನಡುವೆ ಏನೆಲ್ಲ ಸಮಸ್ಯೆಗಳನ್ನು ತಂದೊಡುತ್ತೆ, ಆ ಘಟನೆಗಳೆಲ್ಲ ಯಾಕೆ ತಮಗೆ ಜರುಗುತ್ತಿವೆ, ಇದಕ್ಕೆಲ್ಲ ಕಾರಣವೇನು ಎಂದು ಹುಡುಕಲು ಹೊರಟಾಗ ತೆರೆದುಕೊಳ್ಳುವ ರೋಚಕ ವಿಚಾರಗಳೇ ಸಿನಿಮಾದ ಎಳೆ. ಇದೆಲ್ಲವನ್ನು ಸೈನ್ಸ್ ಫಿಕ್ಷನ್ ಜಾನರ್ ನಡಿ ರೋಚಕವಾಗಿ ಕಟ್ಟಿಕೊಡಲಾಗಿದೆ ಎನ್ನುತ್ತದೆ ಚಿತ್ರತಂಡ. ಒಟ್ಟಿನಲ್ಲಿ ಒಂದು ಹೊಸ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ಉಣಬಡಿಸಲಿದೆ ಎನ್ನುವುದು ಚಿತ್ರತಂಡದ ಭರವಸೆಯ ಮಾತುಗಳು.
ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಖುಷಿಯಲ್ಲಿರುವ ಚಿತ್ರತಂಡ ಡಿಸೆಂಬರ್ 10ಕ್ಕೆ ಸಿನಿಮಾ ತೆರೆಗೆ ತರುತ್ತಿದೆ. ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದು, ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ
ಸಿಂಘ ಸಂಗೀತ ನಿರ್ದೇಶನವಿದೆ. ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಚಿತ್ರದಲ್ಲಿದೆ.