ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.23) : ಸಂಘಟನೆಯ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ನೌಕರರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಸಂತೆಹೊಂಡದ ಸಮೀಪವಿರುವ ಟಿಪ್ಪುಶಾದಿ ಮಹಲ್‍ನಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ 2022 ರ ವರ್ಣರಂಜಿತ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಘಟನೆ ಕಟ್ಟುವುದು ಕಷ್ಟದ ಕೆಲಸ. ಎಲ್ಲಾ ಸಂಘಟನೆಗಳಲ್ಲೂ ಪರ ವಿರೋಧ ಇದ್ದೇ ಇರುತ್ತದೆ. ಬೇಸರ ಮಾಡಿಕೊಳ್ಳದೆ ಸಂಘಟನೆಯಲ್ಲಿ ನಮ್ಮದೇ ಆದ ಛಾಪು ಮೂಡಿಸಬೇಕಿದೆ. ಕಚೇರಿಗೆ ಕೆಲಸದ ನಿಮಿತ್ತ ಬರುವ ಬಡವರಿಗೆ ಕೈಲಾದ ಸೇವೆ ಮಾಡಬೇಕೆನ್ನುವ ತುಡಿತದಿಂದ ಸಂಘಟನೆಗೆ ಬಂದೆ. ಇದಕ್ಕೆ ಎಲ್ಲರ ಪ್ರೋತ್ಸಾಹವೂ ಸಿಕ್ಕಿತು. ಸರ್ಕಾರ ನೌಕರರಿಗೆ ಸಂಬಳ, ವಿಶೇಷ ಸವಲತ್ತುಗಳನ್ನು ನೀಡಿದೆ. ಇಷ್ಟೆಲ್ಲಾ ಅನುಕೂಲ ಪಡೆದುಕೊಂಡು ಬಡವರ ಪರ ಕೆಲಸ ಮಾಡದಿದ್ದೆರೆ ಏನು ಪ್ರಯೋಜನ. ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ. ಶಿಕ್ಷಣ, ಆರೋಗ್ಯ ಮುಖ್ಯ, ಎನ್.ಪಿ.ಎಸ್.ಪದ್ದತಿಯನ್ನು ತೆಗೆದು ಮೊದಲಿನಂತೆ ಓ.ಪಿ.ಎಸ್.ಪದ್ದತಿ ಜಾರಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೇತನ ತಾರತಮ್ಯ ನಿವಾರಣೆಯಾಗಬೇಕು. ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಂಘದ ರಾಜ್ಯಾಧ್ಯಕ್ಷರು ದಿನದ 24 ಗಂಟೆಯೂ ಬೇಸರವಿಲ್ಲದೆ ಸ್ಪಂದಿಸುತ್ತಾರೆ. ಅಂತಹ ಅಧ್ಯಕ್ಷರು ಸಿಕ್ಕಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಜಾಗ ಗುರುತಿಸಿ ಚಿತ್ರದುರ್ಗದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುತ್ತೇನೆಂದು ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿರವರು ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಹೋರಾಟಕ್ಕೆ ಯಾವಾಗ ಕರೆ ಕೊಟ್ಟರು ಹೊರಡಲು ಸಿದ್ದರಾಗಿರಿ ಎಂದು ಅಲ್ಪಸಂಖ್ಯಾತ ನೌಕರರಲ್ಲಿ ಕೆ.ಮಂಜುನಾಥ್ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ರಹೀಂ ಖಾಜಿ ಮಾತನಾಡುತ್ತ ರಾಜ್ಯದಲ್ಲಿರುವ ವಿವಿಧ 78 ಇಲಾಖೆಯಲ್ಲಿರುವ ಅಲ್ಪಸಂಖ್ಯಾತ ನೌಕರರನ್ನು ಒಂದೆಡೆ ಸೇರಿಸಿ ಅವರ ಕಷ್ಟ-ಸುಖ, ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಅಲ್ಪಸಂಖ್ಯಾತ ನೌಕರರ ಕ್ಷೇಮಾಭಿವೃದ್ದಿ ಸಂಘವನ್ನು ಕಟ್ಟಲಾಗಿದೆ. ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಯಾವ್ಯಾವ ಸೌಲಭ್ಯಗಳಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ರಾಜ್ಯದ ಬಹುತೇಕ ಕಡೆ ಉರ್ದು-ಕನ್ನಡ ಶಾಲೆಗಳು ಬೇರೆ ಬೇರೆ ಕಡೆ ಇದೆ. ಅದಕ್ಕಾಗಿ ಉರ್ದು ಹಾಗೂ ಕನ್ನಡ ಶಾಲೆಯನ್ನು ಒಂದೆ ಕಡೆ ಇರಿಸಿ ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಸಾಮರಸ್ಯವನ್ನು ಬೆಳೆಸಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕೊಡಿಸುವುದಕ್ಕಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಶಫಾಯತ್‍ವುಲ್ಲಾ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಅಲ್ಪಸಂಖ್ಯಾತ ನೌಕರರ ಹಿತದೃಷ್ಟಿಯಿಂದ 2013 ರಲ್ಲಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು. ನೌಕರರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುವುದು ಸಂಘದ ಗುರಿ. ಪ್ರತಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಶಾಖೆ ಅಸ್ತಿತ್ವದಲ್ಲಿದೆ. ಸಂಘ ಕಟ್ಟಿ ಜವಾಬ್ದಾರಿಯಿಂದ ಬೆಳೆಸುವುದು ಕಷ್ಟದ ಕೆಲಸ. 1200 ರಿಂದ 1500 ನೌಕರರು ಜಿಲ್ಲೆಯಲ್ಲಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸೌಹಾರ್ಧತೆಯಿಂದ ಬದುಕಬೇಕಿದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಸೈಯದ್ ಅಫಾಖ್ ಅಹಮದ್ ಮಾತನಾಡುತ್ತ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ನೌಕರರು ತಮ್ಮ ಸಮಸ್ಯೆ ಕುಂದುಕೊರತೆ, ಬೇಡಿಕೆಗಳ ಕುರಿತು ಚರ್ಚಿಸಲು ಎಲ್ಲಿಯೂ ಸ್ಥಳಾವಕಾಶವಿಲ್ಲ. ಅದಕ್ಕಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸ್ಥಳದ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ್‍ರವರಲ್ಲಿ ವಿನಂತಿಸಿದರು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಮುಬೀನ್ ಮುನಾವರ್ ಮಾತನಾಡಿ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವಿದೆ. ಸಂವಹನದ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕಾಗಿ ಹಲವಾರು ವಿಧಿ ವಿಧಾನಗಳಿವೆ. ಸರ್ಕಾರದ ಯಾವುದೇ ಒಂದು ಕೆಲಸ ಮಾಡುವಾಗ ಮೇಲು-ಕೀಳು ಎನ್ನುವ ತಾರತಮ್ಯವಿರಬಾರದು ಹೊಂದಾಣಿಕೆ ಮುಖ್ಯ. ವೃತ್ತಿ ಧರ್ಮವಿಟ್ಟುಕೊಂಡು ನೌಕರರು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಶಿಕ್ಷಣ ಸಂಯೋಜಕಿ ಸಮೀರ, ಹಿದಾಯತ್‍ವುಲ್ಲಾ ಷರೀಫ್, ತಾಜೀರ್ ಪಾಷ, ಬಷೀರ್‍ಖಾನ್, ಖಾಜ ಹುಸೈನ್, ಅಲ್‍ತಮಾಷ್, ಮೊಹಮದ್ ಇಕ್ಬಾಲ್, ಉಮರ್‍ಭಾಷ, ಗೌಸುಲ್ ಆಜಂ, ಮೊಹಮದ್‍ಖಾನ್, ನಯಾಜ್‍ಅಹ್ಮದ್, ತನ್ವಿರ್ ಅಹಮದ್, ಇನಾಯತ್‍ವುಲ್ಲಾ, ತಜೀರ್‍ಪಾಷ, ಖಾಜ ಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.