ಬೆಂಗಳೂರು: ಕೈಗಾರಿಗಳಿಗೆ ಉತ್ತೇಜನ ನೀಡಲು ಮಂಜೂರಾದ ಭೂಮಿಯ ಕ್ರಯಪತ್ರವನ್ನು ಕೈಗಾರಿಕೆಗಳು ಆರಂಭವಾದ 10ರಿಂದ 15 ದಿನಗಳ ಒಳಗೆ ಕೊಡಲು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ‘ಹೊಸ ನೀತಿ’ ರೂಪಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೈಗಾರಿಕಾ ಯೋಜನೆಗಳು ವಿಳಂಬವಾಗುವುದನ್ನು ತಪ್ಪಿಸಲು ಉತ್ಪಾದನಾ ಕೈಗಾರಿಕೆಗಳು ತಮ್ಮ ಘಟಕಗಳನ್ನು ಸ್ಥಾಪಿಸಲು ಪ್ರಾರಂಭಿಸಿದ 10 ರಿಂದ 15 ದಿನಗಳಲ್ಲಿ ತಮಗೆ ಮಂಜೂರು ಮಾಡಿದ ಭೂಮಿಯ ಕ್ರಯ ಪತ್ರವನ್ನು ಪಡೆಯಲು
ಅನುಕೂಲ ಮಾಡಿಕೊಡುವ ನೀತಿಯನ್ನು ಶೀಘ್ರದಲ್ಲೇ ಜಾರಿ ಮಾಡಲಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವನ್ನು ತಪ್ಪಿಸುವುದರ ಜೊತೆಗೆ ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚಿನ ಅನುಕೂಲವಾಗಲಿದೆ. ಇದರಿಂದಾಗಿ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಭಿವೃದ್ಧಿಪಡಿಸಿದ ಜಮೀನನ್ನು ಮಾರುಕಟ್ಟೆಯ ಬೆಲೆ ಶೇ.15ರಿಂದ 20ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ.ದೇಶದಲ್ಲೇ ”ರಾಜ್ಯವು ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಪ್ರಮುಖ ಉತ್ಪಾದನಾ ಕೈಗಾರಿಕೆಗಳಿಗೆ ನೆಲೆಯಾಗಿದೆ”ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ 2022 ರ ನವೆಂಬರ್ ತಿಂಗಳಲ್ಲಿ
ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ ಸುಮಾರು ₹ 10 ಲಕ್ಷ ಕೋಟಿ ಹೂಡಿಕೆಯ ಗುರಿ ಹೊಂದಿದ್ದೇವೆ ಎಂದು ಹೇಳಿದರು.