ಚಿತ್ರದುರ್ಗ. ಫೆ.26: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ತರುವಾಯ ವಿವಿಧ ಬಡಾವಣೆಗಳ ಉದ್ಯಾನವನಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳ ಅಳವಡಿಕೆ, ಕೆರೆಗಳ ಪುನಃಶ್ಚೇತನಕ್ಕೆ ಆದ್ಯತೆ ನೀಡಿ ಕೆಲಸ ನಿರ್ವಹಿಸಿದ್ದೇನೆ. ಅಧಿಕಾರವಧಿಯ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಹೇಳಿದರು.
ಎರಡು ವರ್ಷಗಳು ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧಿಕಾರದಿಂದ ನಿರ್ಗಮಿಸುತ್ತಿರುವ ಪ್ರಯುಕ್ತ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಎಂ.ಕೆ.ತಾಜ್‍ಪೀರ್ ಮಾತನಾಡಿದರು.
ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಸುಮಾರು ರೂ. 1.75 ಕೋಟಿ ವೆಚ್ಚದಲ್ಲಿ ಕೆಳಗೋಟೆಯ ಚನ್ನಕೇಶವ ಉದ್ಯಾನವನ, ಗಾಂಧಿನಗರ, ಪಿಳ್ಳೆಕೆರೆನಹಳ್ಳಿ ಗ್ರಾಮ, ವಿದ್ಯಾನಗರ ಹಾಗೂ ಓ.ಎಂ.ಸಿ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ, ಕಾಂಕ್ರೀಟ್ ರಸ್ತೆ ಮತ್ತು ಅಲಂಕಾರಿಕ ದೀಪಗಳ ಅಳವಡಿಕೆ ಪೂರ್ಣಗೊಳಿಸಲಾಗಿದೆ. ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆಯ ಏರಿಯ ಮೇಲೆ ಪಾದಚಾರಿ ಮಾರ್ಗ ಹಾಗೂ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಟೆ ಈಶ್ವರ ದೇವಸ್ಥಾನ ಹಾಗೂ ರಾಮದೇವರ ವಡ್ಡು ಬಳಿ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಂಡಿವೆ. ನಾಗರಿಕರ ಆರೋಗ್ಯ ಮತ್ತು ಮಕ್ಕಳ ಮನರಂಜನೆಗಾಗಿ ವಿಶೇಷ ಒತ್ತು ನೀಡಲಾಗಿದ್ದು, ಗಾಂಧಿನಗರ, ರಾಮದೇವರ ವಡ್ಡು ಹಾಗೂ ತಿಮ್ಮಣ್ಣನಾಯಕನ ಕೆರೆ ಏರಿಯ ಮೇಲೆ ರೂ.75 ಲಕ್ಷ ವೆಚ್ಚದಲ್ಲಿ ಬಯಲು ಜಿಮ್ ಹಾಗೂ ಆಟಿಕೆಗಳನ್ನು ಅಳವಡಿಸಲಾಗಿದೆ.
ಕೆಂಚಪ್ಪ ಸ್ವಾಮಿ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ, ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಪೆವಿಲಿಯನ್ ನಿರ್ಮಾಣಕ್ಕೆ ಒಟ್ಟು 45 ಲಕ್ಷ ವ್ಯಯಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಧಿಕಾರದಿಂದ ಸುಮಾರು 500 ಜನರು ಕುಳಿತು ವೀಕ್ಷಿಸಬಹುದಾದ ಪೆವಿಲಿಯನ್ ಹಳೇ ಮಾಧ್ಯಮ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಈ ಪೆವಿಲಿಯನ್‍ಗೆ ಕೆನೋಪಿ ಅಳವಡಿಸುವ ಯೋಜನೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
2025-2026ನೇ ಸಾಲಿನಲ್ಲಿ ಸುಮಾರು ರೂ.2.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಮೆದೇಹಳ್ಳಿ ಪಂಚಾಯಿತಿ ವ್ಯಾಪ್ತಿ, ಕೆಳಗೋಟೆ, ಪಿಳ್ಳೆಕೆರೆನಹಳ್ಳಿ ಹಾಗೂ ಎಂ.ಕೆ.ಹಟ್ಟಿ ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಿ.ವಿ.ಕೆ.ಎಸ್, ನಿಜಲಿಂಗಪ್ಪ ಉದ್ಯಾನವನ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ವಿವಿಧೆಡೆ ಜಿಮ್ ಉಪಕರಣಗಳ ಅಳವಡಿಕೆಗೆ ರೂ. 01 ಕೋಟಿ ಮೀಸಲಿಡಲಾಗಿದೆ. ಕಿರುಬನಕಲ್ಲು ಹಾಗೂ ಮೆದೇಹಳ್ಳಿಯಲ್ಲಿ ಎರಡು ಹೊಸ ಉದ್ಯಾನವನಗಳ ನಿರ್ಮಾಣಕ್ಕೆ ರೂ. 1.10 ಕೋಟಿ ಅನುದಾನದ ಆರ್ಥಿಕ ಅನುಮೋದನೆ ದೊರೆತಿದೆ ಎಂದರು.
ಮುರುಘಾಮಠದ ಮುಂಭಾಗದ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ. ಮೊದಲ ಹಂತದ ರೂ. 5.00 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದರೆ, ಎರಡನೇ ಹಂತದ ರೂ. 2.27 ಕೋಟಿ ವೆಚ್ಚದ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ. ತಿಮ್ಮಣ್ಣನಾಯಕ ಕೆರೆಯ ಸೌಂದರ್ಯೀಕರಣದ ಅಡಿಯಲ್ಲಿ ಪಾದಚಾರಿ ಮಾರ್ಗ ಮತ್ತು ಎಲ್‍ಇಡಿ ದೀಪಗಳ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಚಿತ್ರದುರ್ಗ ನಗರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 15 ರಿಂದ 20 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಗಾಂಧಿನಗರ ಹಾಗೂ ಮೆದೇಹಳ್ಳಿ ವ್ಯಾಪ್ತಿಯ ಪಾರ್ಕ್‍ಗಳು ಸೇರಿವೆ ಎಂದು ಎಂ.ಕೆ.ತಾಜ್‍ಪೀರ್ ತಿಳಿಸಿದರು.
ತುರುವನೂರು ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಿದ್ದ ಪಾದಚಾರಿಗೆ ಅಪಘಾತವಾದ ಹಿನ್ನಲೆಯಲ್ಲಿ ಜನರು ರಸ್ತೆಯ ಮೇಲೆ ನಡೆಯುವುದನ್ನು ತಪ್ಪಿಸಲು ರೈಲ್ವೆ ಅಂಡರ್‍ಪಾಸ್ ಸಮೀಪದ ಪಾರ್ಕ್‍ನಲ್ಲಿ ವಾಕಿಂಗ್ ಪಾಥ್ ವ್ಯವಸ್ಥೆ ಮಾಡಲಾಗಿದೆ. ರಾಮದೇವ್ ಬಡಾವಣೆ, ತಾಜ್‍ಪೀರ್ ಬಡಾವಣೆ, ಬಿವಿಕೆ ಲೇಔಟ್ ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಪ್ರಾಧಿಕಾರವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತದೆ, ಆದರೆ ಅವುಗಳನ್ನು ಉಳಿಸುವ, ನಿರ್ವಹಿಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಪಾರ್ಕ್‍ಗಳಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಗಿಡಗಳನ್ನು ಬೆಳೆಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಎಂ.ಕೆ.ತಾಜ್‍ಪೀರ್ ಕೋರಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನಾನು ಬಯಸದೆ ಬಂದ ಭಾಗ್ಯವಾಗಿದೆ, ಅನಿರೀಕ್ಷಿತವಾಗಿ ಒದಗಿ ಬಂದ ಅಧಿಕಾರವನ್ನು ಬಳಸಿಕೊಂಡು ಪ್ರಾಧಿಕಾರ ಎಂದರೆ ಕೇವಲ ಲೇಔಟ್ ಅನುಮೋದನೆ ಮತ್ತು ಎನ್‍ಒಸಿ ನೀಡುವುದಕ್ಕೆ ಸೀಮಿತ ಎಂಬ ಕಲ್ಪನೆಯನ್ನು ಬದಲಿಸಿ, ಅನೇಕ ಸಾರ್ವಜನಿಕ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಅಧ್ಯಕ್ಷನಾಗಿ 24 ತಿಂಗಳ ಅಧಿಕಾರಾವಧಿಯಲ್ಲಿ ಕನಿಷ್ಠ 24 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೆ. ನಿರೀಕ್ಷೆಗಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಾಗಿ ಎಂ.ಕೆ.ತಾಜ್‍ಪೀರ್ ತೃಪ್ತಿ ವ್ಯಕ್ತಪಡಿಸಿದರು.
ನಗರದ ಅಭಿವೃದ್ಧಿಗೆ ಹೊಸ ಮಾಸ್ಟರ್ ಪ್ಲಾನ್:
ಚಿತ್ರದುರ್ಗ ನಗರದ ಹೊಸ ಮಾಸ್ಟರ್ ಪ್ಲಾನ್ ಸಿದ್ದಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಅಧಿಕಾರಿಗಳ ಹಂತದಲ್ಲಿ ಮಾಸ್ಟರ್ ಪ್ಲಾನ್‍ಗೆ ಒಪ್ಪಿಗೆ ದೊರೆತಿದೆ. ಅಂತಿಮವಾಗಿ ನಗರಾಭಿವೃದ್ಧಿ ಸಚಿವರಾದ ಬಿ.ಎ. ಸುರೇಶ್ ಅವರ ಅನುಮೋದನೆ ದೊರೆಯಬೇಕಿದೆ. ಈ ಕುರಿತು ಶಾಸಕರು ಹಾಗೂ ನಗರಸಭೆ ಸದಸ್ಯರ ನಿಯೋಗ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದೆ. ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಸಚಿವರು, ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ. ಹೊಸ ಮಾಸ್ಟರ್ ಪ್ಲಾನ್‍ಗೆ ಅನುಮೋದನೆ ದೊರತರೆ ಐತಿಹಾಸಿಕ ಕೋಟೆ ಸಂಪರ್ಕಿಸುವ ರಿಂಗ್ ರೋಡ್ ಸಂಪರ್ಕ ದೊರಕಲಿದೆ. ಸದ್ಯ ನಗರದಲ್ಲಿ ಪ್ರಾಧಿಕಾರದಿಂದ ಯಾವುದೇ ಲೇಔಟ್ ಅಭಿವೃದ್ದಿ ಪಡಿಸಿಲ್ಲ. ಪ್ರಾಧಿಕಾರದೊಂದಿಗೆ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಲು ಖಾಸಗಿ ಜಮೀನಿನ ರೈತರು ಮುಂದೆ ಬರುತ್ತಿಲ್ಲ. ಸದ್ಯ 70:30 ಅನುಪಾತದಲ್ಲಿ ಖಾಸಗಿ ಡೇವಲಪರ್ಸ್ ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಎಂ.ಕೆ.ತಾಜ್‍ಪೀರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪ್ರಾಧಿಕಾರದ ಸದಸ್ಯರಾದ ದೇವರಾಜ್, ಅಂಜನಪ್ಪ, ಸುರೇಶ್ ಹಾಗೂ ಮೀನಾಕ್ಷಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರಿದ್ದರು.
=======



