ಚಿತ್ರದುರ್ಗ,(ಜನವರಿ.12) : ಕೋವಿಡ್-19 ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ವೈಕುಂಠ ಏಕಾದಶಿ ಹಾಗೂ ಮಕರ ಸಂಕ್ರಾಂತಿ ಹಬ್ಬಗಳ ಆಚರಣೆಯಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿಸಿದೆ.
ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗಧಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಗಳು ಇತ್ಯಾದಿ ಆಯೋಜಿಸುವಂತಿಲ್ಲ ಎಂದು ಜಿಲ್ಲೆಯಾದ್ಯಂತ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ, ಕಾನೂನಿನ ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನಿನ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶದಲ್ಲಿ ತಿಳಿಸಿದ್ದಾರೆ.