ಚಿಕ್ಕಬಳ್ಳಾಪುರ: ಫಿಟ್ ಆ್ಯಂಡ್ ಫೈನ್ ಆಗಿದ್ದವರು. ಜಿಮ್, ವರ್ಕೌಟ್ ಅಂತ ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟಿದ್ದವರು. ಆದ್ರೆ ದಿಢೀರನೇ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಇದೀಗ ಪುನೀತ್ ಸಾವಿನ ಬೆನ್ನಲ್ಲೆ ಸರ್ಕಾರ ಜಿಮ್ ಗಳಿಗೆ, ಫಿಟ್ನೆಸ್ ಸೆಂಟರ್ ಗಳಿಗೆ ಹೊಸ ರೂಲ್ಸ್ ತರಲು ಸೂಚನೆ ನೀಡಿದೆ.
ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಈ ಘಟನೆಯಿಂದ ಅದೆಷ್ಟೋ ಜನ ಜಿಮ್ ಮಾಡಬೇಕಾ ಬೇಡವಾ ಎಂಬ ಗೊಂದಲದಲ್ಲಿದ್ದಾರೆ. ಯಾವುದೋ ಒಂದು ಘಟನೆಯಿಂದಾಗಿ ಇಂಥ ನಿರ್ಧಾರಕ್ಕೆ ಬರುವುದು ತಪ್ಪು. ಈ ಸಂಬಂಧ ಹೃದಯ ತಜ್ಞರ ಮಾಹಿತಿ ಪಡೆದು, ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಗಳಿಗೆ ಮಾರ್ಗಸೂಚಿಗಳನ್ನ ಹೊರಡಿಸಲಿದ್ದೇವೆ ಎಂದಿದ್ದಾರೆ.
ಈ ರೀತಿ ಸಮಸ್ಯೆ ಎದುರಾದಾಗ ಯಾವ ರೀತಿಯ ಟ್ರೀಟ್ಮೆಂಟ್ ಕೊಡಬೇಕು..? ಪ್ರಾಥಮಿಕ ಚಿಕಿತ್ಸೆಗೆ ಜಿಮ್ ನಲ್ಲೇ ಏನು ಮಾಡಬೇಕು ಎಂಬೆಲ್ಲಾ ಅಂಶಗಳು ಹೊಸ ಮಾರ್ಗಸೂಚಿಯಲ್ಲಿ ಇರಲಿವೆ. ಮುಂಜಾಗ್ರತ ಕ್ರಮಗಳ ಬಗ್ಗೆ ಜಿಮ್ ಟ್ರೈನರ್ ಗಳಿಗೂ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.