ಬೆಂಗಳೂರು; ಇಂದಿನಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದೆ. ಕೆಲವೊಂದರ ದರ ಏರಿಕೆಯನ್ನು ಜನರು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಯಾವುದೆಲ್ಲರ ದರ ಏರಿಕೆಯಾಗಿದೆ..? ಜನರಿಗೆ ಈ ವರ್ಷ ಸಿಗುತ್ತಿರುವ ಲಾಭವೇನು ಎಂಬುದನ್ನು ನೋಡೋಣಾ ಬನ್ನಿ.

ಟ್ಯಾಕ್ಸ್ ರಿಲೀಫ್ ಏಪ್ರಿಲ್ 01 ರಿಂದ ಜಾರಿಯಾಗಲಿದೆ. ಅಂದ್ರೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಘೋಷಣೆ ಮಾಡಿದ್ದಂತ ತೆರಿಗೆ ಮಿತಿ ಇಂದಿನಿಂದ ಅನ್ವಯವಾಗಲಿದೆ. ವಾರ್ಷಿಕ 12 ಲಕ್ಷ ಇರುವವರಿಗೆ ಈ ವರ್ಷದಿಂದ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಸಿಗಲಿದೆ. ಹಾಗೇ ಎರಡು ಮನೆಯಿದ್ದರೂ ಅದಕ್ಕೂ ವಿನಾಯಿತಿ ನೀಡಲಾಗಿದೆ. ಎರಡನೇ ಮನೆಯಿಂದ ಬರುವ ಬಾಡಿಗೆ ಆದಾಯಕ್ಕೆ ಟಿಡಿಎಸ್ ವಿನಾಯ್ತಿ ಘೋಷಣೆ ಮಾಡಲಾಗಿದೆ. ಹಿರಿಯ ನಾಗರೀಕರ ಬಡ್ಡಿ ಆದಾಯದ TDS ಮಿತಿಯನ್ನ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ವಿಮಾ ಏಜೆಂಟ್ಗಳ TDS ವಿನಾಯಿತಿ ಮಿತಿ 15 ಸಾವಿರದಿಂದ 20 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಮ್ಯೂಚ್ಯುವಲ್ ಫಂಡ್, ಷೇರು ಲಾಭಾಂಶದ ಮೇಲಿನ ವಿನಾಯಿತಿ ಹೆಚ್ಚಳವಾಗಿದ್ದು, ಟಿಡಿಎಸ್ ವಿನಾಯಿತಿ ಮಿತಿಯನ್ನ 5 ಸಾವಿರದಿಂದ 10 ಸಾವಿರಕ್ಕೆ ಏರಿಸಲಾಗಿದೆ. ಇದೂ ಕೂಡಾ ಇಂದಿನಿಂದ ಅನ್ವಯವಾಗಲಿದೆ.

ಇಂದಿನಿಂದ ಎಟಿಎಂ ಶುಲ್ಕ ಎರಡು ರೂಪಾಯಿ ಹೆಚ್ಚಳವಾಗಿದೆ. ಬ್ಯಾಂಕ್ ನೀಡಿರುವ ಮಿತಿಯೊಳಗೆ ಹಣ ವಿತ್ ಡ್ರಾ ಮಾಡಬೇಕು. ಅದನ್ನು ಮೀರಿದರೆ ಪ್ರತಿ ವಿತ್ ಡ್ರಾಗೆ ಎರಡು ರೂಪಾಯಿ ಬೀಳಲಿದೆ. ಒಂದು ವೇಳೆ ಎರಡು ಸಿಮ್ ಬಳಕೆ ಮಾಡುತ್ತಿದ್ದು, ಬ್ಯಾಂಕ್ ಗೆ ಕೊಟ್ಟ ಸಿಮ್ ರೀಚಾರ್ಜ್ ಮಾಡಿಸದೇ ಹೋದಲ್ಲಿ, ಯುಪಿಐ ನಿಷ್ಕ್ರಿಯಗೊಳಿಸಲು ಆರ್ಬಿಐ ಎಲ್ಲಾ ಬ್ಯಾಂಕ್ ಗಳಿಗೂ ಸೂಚನೆಯನ್ನು ನೀಡಿದೆ. ಅಷ್ಟೇ ಅಲ್ಲ ಇಂದಿನಿಂದ ಹಾಲಿನ ದರ ಏರಿಕೆ ಹಾಗೂ ವಿದ್ಯುತ್ ದರ ಏರಿಕೆಯೂ ಗ್ರಾಹಕರನ್ನ ಸುಡುತ್ತಿದೆ.

