ನವದೆಹಲಿ : ಜನರಲ್ ಬಿಪಿನ್ ರಾವತ್ ನಿಧನರಾದ ಸುಮಾರು 9 ತಿಂಗಳ ನಂತರ ಕೇಂದ್ರ ಸರ್ಕಾರವು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು (ಸಿಡಿಎಸ್ Chief of Defence Staff ) ನೇಮಿಸಿದೆ. ಬಿಪಿನ್ ರಾವತ್ ನಂತರ CDS ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಎಂದು ಪ್ರಕಟಿಸಿದೆ.
ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ಮೇ 2021 ರಲ್ಲಿ ಪೂರ್ವ ಕಮಾಂಡ್ ಮುಖ್ಯಸ್ಥರಾಗಿ ನಿವೃತ್ತರಾದರು. ಚೌಹಾಣ್ ಅವರು ಸೇನೆಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೂರು ಪಡೆಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೇಂದ್ರವು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ರಚಿಸಿದೆ. ಜನರಲ್ ಬಿಪಿನ್ ರಾವತ್ ಅವರು ಜನವರಿ 2020 ರಲ್ಲಿ ದೇಶದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಡಿಸೆಂಬರ್ 2021 ರಲ್ಲಿ, ರಾವತ್ ಮತ್ತು ಅವರ ಪತ್ನಿ ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಇವರೊಂದಿಗೆ 11 ಮಂದಿ ಸಾವನ್ನಪ್ಪಿದ್ದರು. ಅಂದಿನಿಂದ ಸಿಡಿಎಸ್ ಹುದ್ದೆ ಖಾಲಿ ಉಳಿದಿತ್ತು. ಸುಮಾರು 9 ತಿಂಗಳ ನಂತರ, ಕೇಂದ್ರವು ಹೊಸ ಸಿ.ಡಿ.ಎಸ್. ಆಗಿ ಅನಿಲ್ ಚೌಹಾಣ್ ಅವರನ್ನು ನೇಮಿಸಿದೆ.