ಚಿಕ್ಕಮಗಳೂರು: ಇಂದು ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಯನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮತ್ತೊಮ್ಮೆ ಉದ್ಘಾಟನೆ ಮಾಡಲಾಗಿದೆ. ಶಿವಾಜಿ ಪ್ರತಿಮೆಯನ್ನೇ ಇಬ್ಬರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚಾಗಿರುವ ಕಾರಣ ಅವರ ಮತಗಳನ್ನು ಸೆಳೆಯಲು ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರು ಕೂಡ ನಾನಾ ನೀನಾ ಎಂಬಂತ ಯುದ್ಧಕ್ಕೆ ನಿಂತಿದ್ದಾರೆ. ಈ ಪ್ರತಿಷ್ಠೆ, ಜಿದ್ದಾಜಿದ್ದಿ ಬರೀ ಚುನಾವಣೆಯಲ್ಲಿ ಮಾತ್ರವಲ್ಲ ಪ್ರತಿಮೆಯಲ್ಲೂ ಮುಂದುವರೆದಿದೆ.
ಮೊನ್ನೆಯಷ್ಟೇ ಸಿಎಂ ಬೊಮ್ಮಾಯಿ ಅವರು ಹೋಗಿ ಉದ್ಘಾಟನೆ ಮಾಡಿ ಬಂದಿದ್ದರು. ಈ ಬಗ್ಗೆ ಮಾತನಾಡಿದ ಸಿಎಂ, ಅದು ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡಿದ್ದಂತ ಪ್ರತಿಮೆ. ಹೀಗಾಗಿ ಅಧಿಕೃತವಾಗಿ ನಾನೇ ಹೋಗಿ ಉದ್ಘಾಟನೆ ಮಾಡಿ ಬಂದಿದ್ದೆ. ಉದ್ಘಾಟನೆಯಾಗಿರುವ ಪ್ರತಿಮೆಯನ್ನೇ ಮತ್ತೆ ಉದ್ಘಾಟನೆ ಮಾಡುವುದು ಹಾಸ್ಯಾಸ್ಪದ. ಇದನ್ನೆಲ್ಲಾ ನೋಡ್ತಾ ಇದ್ರೆ ಅಧಿಕಾರ ಚಲಾಯಿಸಬೇಕು ಎಂಬ ಭಾವನೆ ಎಷ್ಟಿದೆ ಎಂಬುದು ಗೊತ್ತಾಗುತ್ತೆ. ಉದ್ಘಾಟನೆಯಾದ ಮೇಲೆ ಮತ್ತೆ ಭೇಟಿ ಕೊಡಬಹುದು, ಗೌರವ ಸೂಚಿಸಬಹುದು. ಆದ್ರೆ ಮತ್ತೆ ಉದ್ಘಾಟನೆ ಮಾಡುವುದು ಹಾಸ್ಯಾಸ್ಪದವೇ ಸರಿ ಎಂದಿದ್ದಾರೆ.