ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 21 :ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯು ಅತ್ಯಂತ ಹೇಯ ಘಟನೆಯಾಗಿದ್ದು, ಇದರ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯು ಆಗ್ರಹಿಸುತ್ತದೆ.
ಇದೇ ಸಂದರ್ಭದಲ್ಲಿ, ಈ ಪ್ರಕರಣಕ್ಕೆ ಕೋಮು ಮತ್ತು ಚುನಾವಣಾ ರಾಜಕೀಯದ ಬಣ್ಣವನ್ನು ನೀಡುತ್ತಿರುವ ವಿದ್ಯಮಾನವನ್ನು ಕೂಡ ಎಸ್‍ಯುಸಿಐ(ಸಿ) ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಭಿನ್ನಮತ ಮತ್ತು ನಾಯಕತ್ವದ ಬಿಕ್ಕಟ್ಟಿನಲ್ಲಿರುವ ಬಿಜೆಪಿ ಪಕ್ಷಕ್ಕೆ ಜನರ ಮುಂದೆ ಪರಿಣಾಮಕಾರಿಯಾಗಿ ಹೇಳಿಕೊಳ್ಳುವ ವಿಷಯವೇನೂ ಇಲ್ಲದೆ ಸಪ್ಪಗಾಗಿತ್ತು.
ಇಂತಹ ಸಂದರ್ಭದಲ್ಲಿ ನಡೆದ ಈ ದುರ್ಘಟನೆಯನ್ನು ಬಿಜೆಪಿಯು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ, ಈ ವಿವಾದ ಕೋಮು ದಳ್ಳುರಿಗೆ ದಾರಿ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ.
ಸಮಾಜದಲ್ಲಿ ಒಟ್ಟಾರೆಯಾಗಿ ಪ್ರಧಾನವಾಗಿರುವ ಸ್ವಕೇಂದ್ರಿತ ಮನಸ್ಸು, ಹಿಂಸೆಯ ವೈಭವೀಕರಣ , ಪುರುಷಾಧಿಕಾರದ ಅಹಂ, ನೈತಿಕ ಅಧಃಪತನಗಳಿಂದ ಇಂತಹ ದುರಂತಗಳು ಸಂಭವಿಸುತ್ತಿದ್ದು, ಘಟನೆ ನಡೆದಾಗ ಪ್ರತಿಕ್ರಯಿಸುವುದು ಮಾತ್ರವಲ್ಲದೆ, ಇವುಗಳ ನಿಯಂತ್ರಣಕ್ಕೆ ಆಳುವ ಸರ್ಕಾರಗಳು ಮತ್ತು ಸಮಾಜ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‍ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ಉಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.