ಚಿತ್ರದುರ್ಗ: ಲಿಂಗಾನುಪಾತ ಸರಿಪಡಿಸಿದರೆ ಮುಂದಿನ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ತಿಳಿಸಿದರು.
ಬಜ್ ವುಮೆನ್ ಸಂಸ್ಥೆಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ತನ್ನಲ್ಲಿರುವ ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬಂದು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸಬಲೀಕರಣವಾಗಬೇಕು. ಪ್ರತಿ ಕುಟುಂಬದಲ್ಲಿಯೂ ಮಹಿಳೆಗೆ ಶ್ರಮ ಕಷ್ಟ ಪುರುಷನಿಗಿಂತ ಜಾಸ್ತಿಯಿದೆ. ಗ್ರಾಮೀಣ ಭಾಗ, ಕೊಳಗೇರಿಗಳಲ್ಲಿ ಮಹಿಳೆಯರು ಸಾಕಷ್ಟು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾಳೆ.
ಏಕೆಂದರೆ ಮಹಿಳೆಗೆ ತನ್ನ ಆರೋಗ್ಯಕ್ಕಿಂತ ಕುಟುಂಬದ ಮೇಲೆ ಹೆಚ್ಚಿನ ಕಾಳಜಿಯಿರುತ್ತದೆ. ಎಲ್ಲಾ ರಂಗದಲ್ಲಿಯೂ ಮಹಿಳೆ ಅನೇಕ ಸಾಧನೆಗಳನ್ನು ಮಾಡಿದ್ದಾಳೆ. ನಿಮ್ಮ ಹಕ್ಕನ್ನು ನೀವು ಪ್ರತಿಪಾದಿಸಿ ಬಜ್ ವುಮೆನ್ ಸಂಸ್ಥೆಯಿಂದ ಸಿಗುವ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಎನ್.ಸುಧಾ ಮಾತನಾಡಿ ಮಹಿಳೆ ಮನೆಯ ಸಂಸಾರಕ್ಕಷ್ಟೆ ಸೀಮಿತವಾಗಿರದೆ ಹೊರಗೆ ಬಂದು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕು. ಅದಕ್ಕಾಗಿ ಬಜ್ ವುಮೆನ್ ಸಂಸ್ಥೆ ಮಹಿಳೆಯರ ಜ್ಞಾನ ಮತ್ತು ಕೌಶಲ್ಯ ವೃದ್ದಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರ ಜೊತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಬಲಶಾಲಿಗಳಾಗುವ ಮೂಲಕ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂದು ಕರೆ ನೀಡಿದರು.
ಮಹಿಳೆ ಪುರುಷ ಎನ್ನುವ ಅಸಮಾನತೆಯನ್ನು ಹೋಗಲಾಡಿಸಲು ಬರಿ ಭಾಷಣಗಳಿಂದ ಸಾಧ್ಯವಿಲ್ಲ. ಕಾರ್ಯರೂಪಕ್ಕೆ ಬರಬೇಕು. ಮೊದಲು ಆರ್ಥಿಕವಾಗಿ ಸಬಲರಾದಾಗ ಬೇರೆಯವರನ್ನು ಅವಲಂಭಿಸದೆ ಸ್ವಾವಲಂಭಿಗಳಾಗಿ ಬದುಕಬಹುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಜ್ ವುಮೆನ್ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿಸಲು ಬಜ್ ವುಮೆನ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ.
ಕರ್ನಾಟಕದ ಎಂಟು ಜಿಲ್ಲೆ 28 ತಾಲ್ಲೂಕಿನ ಏಳು ಸಾವಿರ ಹಳ್ಳಿಗಳಲ್ಲಿ ಸ್ವಯಂ ಶಕ್ತಿ, ಗೆಳತಿ, ಸ್ಪೂರ್ತಿ, ಜೇನುಗೂಡು, ಬಜ್ ವ್ಯಾಪಾರ, ಬಜ್ ಹಸಿರು ಕಾರ್ಯಕ್ರಮಗಳ ಮೂಲಕ ಮೂರು ಲಕ್ಷ ಮಹಿಳೆಯರನ್ನೊಳಗೊಂಡಂತೆ ಏಳು ಸಾವಿರ ಬಜ್ ಗೆಳತಿಯರು ತಮ್ಮ ಬದುಕಿನ ದಿಕ್ಕನ್ನ ತಾವೇ ಬದಲಾಯಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಜ್ಞಾನ, ಕೌಶಲ್ಯ, ಅವಕಾಶಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ ಎಂದು ಹೇಳಿದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಪ್ರೋಗ್ರಾಂ ಮ್ಯಾನೇಜರ್ ಯಶೋಧ, ಅಕೌಂಟ್ಸ್ ಮ್ಯಾನೇಜರ್ ಶಾರದ ವೇದಿಕೆಯಲ್ಲಿದ್ದರು.