ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ : ಚೆಕ್ ಪೋಸ್ಟ್,  ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಸಿಬ್ಬಂದಿ ನೇಮಕ ಕುರಿತು ಮಹತ್ವದ ಮಾಹಿತಿ ಇಲ್ಲಿದೆ…!

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಫೆ.04) : ಭಕ್ತಾಧಿಗಳಿಗೆ ಅನುಕೂಲವಾಗುವಂತೆ ದೇಗುಲದ ಸಮೀಪದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ ವರ್ಷ ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದಾಗಿ ವಯೋವೃದ್ಧರು, ಮಹಿಳೆ, ಮಕ್ಕಳು, ಗರ್ಭಿಣಿಯರು ರಥೋತ್ಸವ ವೀಕ್ಷಣೆಗೆ ತೆರಳಲು ತುಂಬಾ ತೊಂದರೆ ಅನುಭವಿಸಿರುವುದು ಗಮನಕ್ಕೆ ಬಂದಿದೆ.  ಹಾಗಾಗಿ ಈ ಬಾರಿ ದೇಗುಲದ ಸಮೀಪದಲ್ಲಿಯೇ ಪಾರ್ಕಿಗ್ ವ್ಯವಸ್ಥೆ ಮಾಡಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಜಾತ್ರೆ ಒಳಗಾಗಿ  ಪಟ್ಟಣ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕ ಸರಿಪಡಿಸಬೇಕು. ಇದುವರೆಗೂ ಕ್ರಮಬದ್ಧವಾಗಿ ಜಾತ್ರೆ ಮಹೋತ್ಸವ ಆಯೋಜಿಸಲಾಗಿದೆ. ಕಳೆದ ಬಾರಿ ಎದುರಿಸಿದ ತೊಂದರೆಗಳನ್ನು ಈ ಬಾರಿ ಪರಿಹರಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.

ರಸ್ತೆ ಗುಂಡಿ ಮುಚ್ಚಲು ಸೂಚನೆ: ರಥ ಬೀದಿ ರಸ್ತೆ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಎಲ್ಲ ರಸ್ತೆ ಮಾರ್ಗಗಳಲ್ಲಿ ಬಿದ್ದಿರುವ ಗುಂಡಿಯನ್ನು ತಕ್ಷಣವೇ ಮುಚ್ಚುವ ಕೆಲಸ ಮಾಡಬೇಕು. ರಸ್ತೆಯ ಪಕ್ಕದಲ್ಲಿರುವ ಜಾಲಿಯನ್ನು ತೆರವುಗೊಳಿಸಬೇಕು, ನಗರದಾದ್ಯಂತ ಬೀದಿದೀಪದ ವ್ಯವಸ್ಥೆ ಆಗಬೇಕು  ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

7 ಕಡೆ ಚೆಕ್ ಪೋಸ್ಟ್‌, ಪಾರ್ಕಿಂಗ್ : ಜಾತ್ರಾ ಮಹೋತ್ಸವ ಅಂಗವಾಗಿ 7 ಕಡೆ ಚೆಕ್ ಪೋಸ್ಟ್‌ ಹಾಗೂ ಪಾರ್ಕಿಂಗ್ ಸ್ಥಾಪಿಸಲಾಗುವುದು. 30 ಕಡೆ ಸಿಸಿ ಟಿವಿ ಕ್ಯಾಮೆರಾ, 3 ಕಡೆ ವಾಚ್ ಟವರ್, 22 ಕಡೆ ಸಹಾಯವಾಣಿ ಕೇಂದ್ರ ಸ್ಥಾಪನೆ, ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ, ಕಾನ್ಸ್‌ಟೇಬಲ್ ಸೇರಿದಂತೆ 2550 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *