ಸುದ್ದಿಒನ್, ನಾಯಕನಹಟ್ಟಿ, ಜನವರಿ. 25 : ಬುಡಕಟ್ಟು ಸಮುದಾಯದ ಆರಾಧ್ಯ ಅಭಯ ದೇವತೆ ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ಜಾತ್ರೆಯು ಸೋಮವಾರದಿಂದ ಬುಧವಾರದವರೆಗೂ ಅದ್ದೂರಿಯಾಗಿ ನಡೆಯಲಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪ್ರತಿವರ್ಷವೂ ಮಾಘಮಾಸ ಎರಡನೇ ಮಂಗಳವಾರ ಜಾತ್ರೆಯು ಆರಂಭವಾಗುತ್ತದೆ. ಅದರಂತೆ ಜ.26 ಸೋಮವಾರದಂದು ಮಧ್ಯಾಹ್ನ 3 ಗಂಟೆಗೆ ಚೌಡೇಶ್ವರಿ ದೇವಿಯ ರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು. ನಂತರ ದೇವಿಗೆ ಗಂಗಾಪೂಜೆಯನ್ನು ನೆರವೇರಿಸಿ ಸ್ವಸ್ತಿವಾಹನ, ಕಂಕಣಧಾರಣೆ, ಮಂಟಪಪೂಜೆ, ನವಗ್ರಹ ಆರಾಧನೆ ಸೇರಿದಂತೆ ಸಂಪ್ರದಾಯದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗುವುದು.
ಜ.27ರಂದು ದೇವಾಯಲದ ಗುಡಿಕಟ್ಟಿನವರು ಬೆಳಿಗ್ಗೆ 8 ಗಂಟೆಗೆ ಸಾಂಪ್ರದಾಯಿಕ ವಾಧ್ಯಗಳೊಂದಿಗೆ ದೇವಿಗೆ ಉಡಿಹಕ್ಕಿ ತುಂಬುವುದು, ಜೋಗಿಹಟ್ಟಿ ಗ್ರಾಮಸ್ಥರಿಂದ ಕಾಸುಮೀಸಲು ಹರಕೆ ಒಪ್ಪಿಸುವುದು. ಮಧ್ಯಾಹ್ನ 3 ಗಂಟೆಗೆ ಚೌಡೇಶ್ವರಿ ದೇವಿಯನ್ನು ಸುಂದರವಾಗಿ ಅಲಂಕೃತಗೊಂಡ 40 ಅಡಿ ಎತ್ತರದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಿಲಾಗುವುದು. ನಂತರ ರಥವು ಪಾದಗಟ್ಟೆಗೆ ಹೋಗಿಬಂದು ಸ್ವಸ್ಥಾನ ಸೇರುತ್ತದೆ.
ಜ.28ರ ಬುಧವಾರ ವೀರ ಪೋತುರಾಜರಿಂದ ಪೂಜಾ ವಿಧಿವಿಧಾನಗಳ ಕಾರ್ಯಕ್ರಮ ನಡೆದು ಸಂಜೆ 4 ಗಂಟೆಗೆ ಭಕ್ತರಿಗೆ ಕುಂಕುಮ, ಭಂಢಾರ ಹೂವಿನ ಸಿಂಚನ ಕಾರ್ಯಕ್ರಮ ನಡೆದು ನಂತರ ದೇವಿಯ ಕಂಕಣ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಾಗ ಸದರಿ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ಐತಿಹ್ಯ
ಸುಮಾರು 400 ವರ್ಷಗಳ ಹಿಂದೆ ಸಿಂಗದೂರಿನ ಭಾಗದಿಂದ ಬಂದ ಚೌಡೇಶ್ವರಿ ದೇವಿಯು ನಾಯಕನಹಟ್ಟಿ ದೊಡ್ಡಕೆರೆಯ ಸಮೀಪದಲ್ಲಿರುವ ಬೃಹತ್ ಈಚಲು ಅರಣ್ಯದಲ್ಲಿ ನೆಲೆ ನಿಂತು ಹುತ್ತಗಳಲ್ಲಿ ವಾಸ ಮಾಡುತ್ತಿರುತ್ತಾಳೆ.
ಇದೇ ವೇಳೆ ಸಮೀಪದ ಗ್ರಾಮದ ಈಡಿಗ ಸಮುದಾಯದವರು ಈಚಲು ವನದಲ್ಲಿ ಶೇಂಧಿಗಾಗಿ ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟುತ್ತಿರುತ್ತಾರೆ. ಹೀಗೆ ಒಂದು ದಿನ ಅರಣ್ಯದ ತುಂಬೆಲ್ಲಾ ಹುತ್ತಗಳು ಬೆಳೆದು ನಿಂತಾಗ ಸಿಟ್ಟಿಗೆದ್ದ ಅವರು ಹುತ್ತಗಳನ್ನು ನಾಶ ಮಾಡಿ, ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟಿ ಬರುತ್ತಾರೆ. ಮರುದಿನ ಬಂದು ಮಡಿಕೆಗಳನ್ನು ನೋಡಿದರೆ ಒಂದು ಮಡಿಕೆಯಲ್ಲೂ ಹನಿ ಶೇಂಧಿಯು ಸಂಗ್ರಹವಾಗಿರುವುದಿಲ್ಲವಂತೆ. ಇದರಿಂದ ಭಯಗೊಂಡ ಅವರು ಚಿಂತೆಯಲ್ಲಿದ್ದಾಗ ಯಾರೋ ಒಬ್ಬ ಸಾಧು ಇದು ದೇವಿಯ ಮಹಿಮೆಯಾಗಿದೆ.
ಮೊದಲು ಕ್ಷಮೆ ಕೇಳಿಕೊಳ್ಳಿ ಎಂದರಂತೆ. ಅದರಂತೆ ಈಡಿಗ ಸಮುದಾಯದವರು ಕ್ಷೇಮೆಯಾಚಿಸಿ ಅಂದೇ ಒಂದು ಪುಟ್ಟ ಕಲ್ಲಿನ ಗುಡಿಯನ್ನು ನಿರ್ಮಿಸಿದರಂತೆ. ಇದರಿಂದ ದೇವಿಯು ಸಂತೋಷಗೊಂಡು ಮರುದಿವಸ ಈಚಲು ಮರಕ್ಕೆ ಕಟ್ಟಿದ ಎಲ್ಲಾ ಮಡಿಕೆಗಳಿಂದ ಶೇಂಧಿಯು ತುಂಬಿ ಹರಿಯುತಿತ್ತು.
ಈ ಪುಟ್ಟ ಗುಡಿಸಲಿನಲ್ಲಿ ದೇವಿಯು ನೆಲೆಗೊಂಡು ಬೇಡಿದ ವರಗಳನ್ನು ಕರುಣಿಸುತ್ತ ಭಕ್ತರ ಮನೋಮಂದಿರದಲ್ಲಿ ಅಭಯ ದೇವತೆಯಾಗಿ ಶಾಶ್ವತವಾಗಿ ನೆಲೆಗೊಂಡು ಪ್ರಸಿದ್ಧ ಪಡೆದಿದ್ದಾಳೆ. ಅಂದಿನಿಂದ ಪ್ರತಿವರ್ಷವೂ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿವೆ.
2002 ರಿಂದ ನೂತನ ದೇವಾಲಯವನ್ನು ನಿರ್ಮಾಣ ಮಾಡಿ ವಿಜೃಂಭಣೆಯಿಂದ ಜಾತ್ರೆ, ಉತ್ಸವಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.
ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ಬೋಸೆದೇವರಹಟ್ಟಿ, ಮಲ್ಲೂರಹಳ್ಳಿ ಸೇರಿದಂತೆ ತಳಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಆಂದ್ರ ಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಸರ್ವ ಜನಾಂಗದ ಭಕ್ತರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುವ ಪ್ರತೀತಿ ಇದೆ.
ಕೃಷಿಮೂಲ ಪರಂಪರೆಯ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಯಾವುದೇ ರೋಗಗಳು ಬಂದರೂ ದೇವಿಯ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಹಾಗಾಗಿ ಇಂದಿಗೂ ಜಾತ್ರೆ ದಿನ ಸಂಜೆ ರೈತರು ತಮ್ಮ ಜಾನುವಾರುಗಳನ್ನು ದೇವಾಲಯಕ್ಕೆ ಪ್ರದಕ್ಷಣೆ ಹಾಕಿಸಿ ಆ ರಾತ್ರಿ ಅಲ್ಲಿಯೇ ತಂಗಿಸಿ ಮರುದಿನ ತಮ್ಮ ಗ್ರಾಮಗಳಿಗೆ ಕರೆದುಕೊಂಡು ಹೋಗುವ ಪ್ರತೀತಿ ಇದೆ.
– ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು)
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಇಂದಿನಿಂದ ನಡೆಯುವ ಜಾತ್ರೆಯು 25ನೇ ವರ್ಷದ ಬೆಳ್ಳಿ ಮಹೋತ್ಸವದಾಗಿದ್ದು, ಅದ್ದೂರಿಯಾಗಿ ಆಚರಿಸಲು ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
-ಎಂ.ವೈ.ಟಿ.ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ.







