ಅಮೃತಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ |  ಶ್ರೇಷ್ಠ ಭಾರತಕ್ಕಾಗಿ ತಪ್ಪದೆ ಮತದಾನ ಚಲಾಯಿಸೋಣ‌ : ಟಿ.ಪಿ.ಉಮೇಶ್

1 Min Read

ಸುದ್ದಿಒನ್, ಹೊಳಲ್ಕೆರೆ ಜನವರಿ. 25: ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಮತದಾನವೇ ಶ್ರೇಷ್ಠ ದಾನ. ಪ್ರಜೆಗಳು ಮತದಾನ ಮಾಡಿ ಆಯ್ಕೆ ಮಾಡುವ ಪ್ರತಿನಿಧಿಗಳಿಂದ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಯೋಗ್ಯ ನಾಯಕರ ಆಯ್ಕೆಗೆ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ತಪ್ಪದೆ ಮತದಾನ ಮೊಡೋಣ ಎಂದು ಅಮೃತಾಪುರ ಮತಗಟ್ಟೆ ಅಧಿಕಾರಿಗಳಾದ ಟಿ.ಪಿ.ಉಮೇಶ್ ಹೇಳಿದರು.

ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾಲಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ಅರ್ಹ ಮತದಾರರಿಂದ ಮತದಾನದ ಮೂಲಕ ಸ್ಥಳೀಯ, ರಾಜ್ಯ ಹಾಗು ಕೇಂದ್ರ ಸರ್ಕಾರಗಳು ರಚನೆಗೊಳ್ಳುತ್ತವೆ. ಸರ್ಕಾರಗಳು ಪ್ರಜಾ ಪ್ರತಿನಿಧಿಗಳಿಂದ ನಿಯಂತ್ರಣಕ್ಕೊಳಪಟ್ಟು ದೇಶದ ಎಲ್ಲ ಜನರಿಗೆ ನ್ಯಾಯಸಮ್ಮತವಾದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ನ್ಯಾಯಿಕ ಹಾಗು ರಾಜಕೀಯ ಹಕ್ಕುಗಳ ದೊರಕಿಸಿಕೊಡಲು ಶ್ರಮಿಸುತ್ತದೆ. ಯೋಗ್ಯ, ಪ್ರಾಮಾಣಿಕ, ದೇಶಭಕ್ತ, ಜನಸೇವಾ ಭಾವನೆಯ ನಾಯಕರು ದೇಶದ ಘನತೆ ಗೌರವ ಕಾಪಾಡುತ್ತ ದೇಶವಾಸಿಗಳು ಸುಖಿ ಸಮೃದ್ಧ ಜೀವನಾವಶ್ಯಕತೆಗಳ ಪೂರೈಸಿಕೊಳ್ಳಲು ಹಗಲಿರುಳು ದುಡಿಯುತ್ತಾರೆ. ಚುನಾವಣೆಗಳು ದೇಶದ ಜನರ ಅಸ್ತಿತ್ವ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭಗಳಾಗಿವೆ. ಅರ್ಹ ಮತದಾರರು ತಪ್ಪದೇ ಚುನಾವಣೆ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಮತ ಚಲಾಯಿಸಬೇಕು. ಭಾರತ ಚುನಾವಣಾ ಆಯೋಗ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು ಅದು ರಚನೆಗೊಂಡು ಇಂದಿಗೆ ಎಪ್ಪತ್ತೈದು ವರ್ಷಗಳಾಗಿದೆ. ಚುನಾವಣಾ ಆಯೋಗದ ರಚನೆ ಸಂಸ್ಮರಣೆಗಾಗಿ ಹಾಗು ಮತದಾನ ಜಾಗೃತಿಗಾಗಿ ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವೆವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಚುನಾವಣೆ ಗುರುತಿನ ಚೀಟಿ ವಿತರಿಸಲಾಯಿತು. ಎಲ್ಲ ಮತದಾರರಿಗು ಗ್ರಾಮಸ್ಥರಿಗು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಅಮೃತಾಪುರ ಸರ್ಕಲ್ ಗ್ರಾಮ ಆಡಳಿತಾಧಿಕಾರಿ ರಾಜು, ಮುಖ್ಯಶಿಕ್ಷಕ ಡಿ.ಸಿದ್ಧಪ್ಪ, ಸಹಶಿಕ್ಷಕರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ ಹಾಗು ಗ್ರಾಮಸ್ಥರಾದ ತಿಮ್ಮಮ್ಮ, ಶಾರದಮ್ಮ, ಸುಮ, ವೆಂಕಟೇಶ್ ಹಾಗು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *