ಹಾಸನ : ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣದ ಆರೋಪ ಇಂದು ನಿನ್ನೆಯದಲ್ಲ. ಈಗ ಪರಿಷತ್ ಚುನಾವಣೆಗೂ ಕುಟುಂಬದವರಿಗೆ ಟಿಕೆಟ್ ನೀಡಿರುವುದು ಕೆಲವರ ಕಣ್ಣನ್ನ ಕೆಂಪು ಮಾಡಿದೆ. ಈ ಬಗ್ಗೆ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಪಕ್ಷಗಳೇ ಕಾನೂನು ತರಲಿ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ರೇವಣ್ಣ ಅವರು, ಹಲವು ದಶಕದಿಂದಲೂ ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ. ಇದನ್ನು ಕೊನೆಗಾಣಿಸಲು ರಾಷ್ಟ್ರೀಯ ಪಕ್ಷಗಳೇ ಕಾನೂನು ತರಲಿ. ಹೊಸ ಕಾನೂನು ತಂದರೆ ಅದಕ್ಕೆ ನಾವೂ ಸ್ವಾಗತ ಮಾಡ್ತೇವೆ ಎಂದಿದ್ದಾರೆ.
ಇನ್ನು ಇದೇ ವೇಳೆ ಬೆಳೆ ಪರಿಹಾರದ ಬಗ್ಗೆಯೂ ಮಾತನಾಡಿದ್ದು, ರೈತರ ನೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಬಿಜೆಪಿ ಸರ್ಕಾರ ಎಕ್ಟೇರ್ ಗೆ ಕೇವಲ 6000 ರೂಪಾಯಿ ಪರಿಹಾರ ನೀಡಲು ಹೊರಟಿದೆ. ಇದು ರೈತರಿಗೆ ವೈಜ್ಞಾನಿಕ ಪರಿಹಾರವಲ್ಲ. ಜಿಲ್ಲೆಯಲ್ಲಿ ವಿಪರೀತ ಮಳೆಯ ಕಾರಣ ಮೆಕ್ಕೆಜೋಳ, ರಾಗಿ, ಭತ್ತ, ಕಾಫಿ, ತರಕಾರಿ ಸೇರಿದಂತೆ ಇತರೆ ಪ್ರಮುಖ ಬೆಳೆ ನಾಶವಾಗಿದೆ. 29 ಸಾವಿರ ಹೆಕ್ಟೇರ್ ಕಾಫಿ, 4,200 ಹೆಕ್ಟೇರ್ ಕಾಳುಮೆಣಸು, 2,000 ಹೆಕ್ಟೇರ್ ತರಕಾರಿ ಮತ್ತು ಇತರೆ ಬೆಳೆ 1,000 ಹೆಕ್ಟೇರ್‌ನಲ್ಲಿ ನಾಶವಾಗಿದೆ ಎಂದಿದ್ದಾರೆ.