ಚಿತ್ರದುರ್ಗ : ನಗರದ ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೆದೇಹಳ್ಳಿ ಗ್ರಾಮ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆಬ್ರವರಿ 14 ಮತ್ತು 15 ವರೆಗೆ ಎರಡು ದಿನಗಳ ಕಾಲ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 14 ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರವನ್ನು ಕ್ಷೇತ್ರಶಿಕ್ಷಣಾಧಿಕಾರಿ ಎಮ್.ಎಸ್.ಬಸವರಾಜಯ್ಯ ಉದ್ಘಾಟಿಸುವರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಟಿ.ಷಣ್ಮುಖಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ (ಪ್ರಭಾರೆ) ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎ.ನೀಲಕಂಠಾಚಾರ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಈ.ಮಾರೇಶ್, ದೈಹಿಕ ಶಿಕ್ಷಕ ಪಿ.ಎಸ್.ಗಿರೀಶ್, ಸಹಶಿಕ್ಷಕರಾದ ಜಿ.ಎನ್.ಅಜ್ಜಪ್ಪ, ಪಿ.ನವೀನ, ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.
ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರಿಗೆ ರಾಷ್ಟ್ರಾಭಿಮಾನದ ಕಿಚ್ಚನ್ನು ಮೂಡಿಸಿದ ಬಂಕಿಮಚಂದ್ರ ಚಟರ್ಜಿ ವಿರಚಿತ ರಾಷ್ಟ್ರಸ್ತವ (ವಂದೇಮಾತರಂ), ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರ ಇವರ ರಾಷ್ಟ್ರಗೀತೆ, ಕರ್ನಾಟಕ ವೈಭವ ಸಾರುವ ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆ, ದೇಶದ ಬೆನ್ನೆಲುಬು ಎಂದೇ ಕರೆಯಲ್ಪಡುವ ರೈತಗೀತೆ (ನೇಗಿಲಯೋಗಿ), ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಾಗೂ ಹಿರಿಯ ಕವಿ ದ.ರಾ.ಬೇಂದ್ರೆ ಬರೆದ ರಾಷ್ಟ್ರೀಯ ಧ್ವಜವರ್ಣನಾ ದೇಶಭಕ್ತಿಗೀತೆ (ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ), ಇಕ್ಬಾಲ್ ಅಹಮ್ಮದ್‍ರವರ ಹಿಂದೂಸ್ತಾನ್ ಹಮಾರ, ಹೆಚ್.ಎಸ್.ವೆಂಕಟೇಶ್ ಮೂರ್ತಿಯವರ ವಿರಚಿತ ಐಕ್ಯತಾಗೀತೆ (ಐದು ಬೆರಳು ಸೇರಿ ಒಂದು ಮುಷ್ಠಿಯು), ಮುಂತಾದ ಗೀತೆಗಳನ್ನು ಧ್ವನಿಮುದ್ರಿಕೆಗಳ ಸಂಗೀತ ಸಂಯೋಜನೆಯಲ್ಲಿ ರಾಗ ಬದ್ಧವಾಗಿ ತರಬೇತಿ ನೀಡಲಾಗುವುದು ಎಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಕೆ.ದಯಾನಂದಕುಮಾರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.